ನೂತನ ಸಚಿವರಿಗೆ ಇಂದು ಸಂಜೆ ಖಾತೆ ಹಂಚಿಕೆ ಸಾಧ್ಯತೆ

ಬೆಂಗಳೂರು, ಜೂ.14-ಇಂದು ಪ್ರಮಾಣ ವಚನ ಸ್ವೀಕರಿಸಿರುವ ನೂತನ ಸಚಿವರಿಗೆ ಸಂಜೆಯೊಳಗೆ ಖಾತೆ ಹಂಚಿಕೆಯಾಗುವ ಸಾಧ್ಯತೆಗಳಿದ್ದು, ಹೊಸದಾಗಿ ಸಚಿವರಾಗಿರುವ ಎಚ್.ನಾಗೇಶ್ ಅವರಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ, ರಾಣೆಬೆನ್ನೂರಿನ ಶಾಸಕ ಆರ್.ಶಂಕರ್ ಅವರಿಗೆ ಪೌರಾಡಳಿ ಖಾತೆ ಸಿಗುವ ನಿರೀಕ್ಷೆಗಳಿವೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಜೆಡಿಎಸ್ ಪಾಲಿಗಿದ್ದು, ಈ ಮೊದಲು ಬಿಎಸ್‍ಪಿಯಿಂದ ಶಾಸಕರಾಗಿದ್ದ ಮಹೇಶ್ ಅವರು ಜವಾಬ್ದಾರಿ ನಿಭಾಯಿಸುತ್ತಿದ್ದರು. ಜೆಡಿಎಸ್ ಖೋಟಾದಲ್ಲಿ ಸಚಿವರಾಗಿರುವ ನಾಗೇಶ್‍ಗೆ ಶಿಕ್ಷಣ ಖಾತೆ ಸಿಗಬಹುದು ಎಂದು ಹೇಳಲಾಗಿದೆ.

ಶಂಕರ್ ಅವರು ಈ ಮೊದಲು ಅರಣ್ಯ ಸಚಿವರಾಗಿದ್ದರು. ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಸತೀಶ್ ಜಾರಕಿ ಹೊಳಿ ಅವರನ್ನು ಸೇರಿಸಿಕೊಂಡು ಅರಣ್ಯ ಖಾತೆ ನೀಡಲಾಗಿದೆ. ಆ ಸಂದರ್ಭದಲ್ಲಿ ಶಂಕರ್ ಮತ್ತು ರಮೇಶ್ ಜಾರಕಿ ಹೊಳಿ ಅವರನ್ನು ಕೈ ಬಿಡಲಾಗಿತ್ತು. ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಸಿ.ಎಸ್.ಶಿವಳ್ಳಿ ಬಳಿ ಇದ್ದ ಪೌರಾಡಳಿತ ಖಾತೆಯನ್ನು ಕಾಂಗ್ರೆಸ್ ಖೋಟಾದಲ್ಲಿ ಸಚಿವರಾಗಿರುವ ಶಂಕರ್ ಅವರಿಗೆ ಸಿಗುವ ಸಾಧ್ಯತೆ ಇದೆ.

ಮೊದಲ ಬಾರಿಗೆ ಶಾಸಕರಾದ ಈ ಇಬ್ಬರು ಪಕ್ಷೇತರರು ಕೊನೆಗೆ ಸಂಪುಟ ಸೇರುವ ಮೂಲಕ ಜಾಕ್‍ಪಾಟ್ ಹೊಡೆದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ