ಸಮ್ಮಿಶ್ರ ಸರ್ಕಾರದ ವಿರುದ್ಧ ಬಿಜೆಪಿ ನಾಳೆಯಿಂದ 2 ದಿನ ಹಗಲು ರಾತ್ರಿ ಸತ್ಯಾಗ್ರಹ

ಹೊಸದಿಲ್ಲಿ: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ವೈಫಲ್ಯತೆಯ ವಿರುದ್ಧ ಶುಕ್ರವಾರದಿಂದ ಎರಡು ದಿನ ಹಗಲು-ರಾತ್ರಿ  ಸತ್ಯಾಗ್ರಹ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ತಿಳಿಸಿದ್ದಾರೆ.

ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಎಲ್ಲಾ ರಾಜ್ಯಗಳ ಬಿಜೆಪಿ ಅಧ್ಯಕ್ಷರ ಸಭೆಯನ್ನು ಇಂದು ಆಯೋಜಿಸಲಾಗಿದೆ. ಈ ಸಭೆಯಲ್ಲಿ ಆಯಾ ರಾಜ್ಯದಲ್ಲಿನ ಬಿಜೆಪಿ ಸಾಧನೆಯ ಪರಾಮರ್ಶೆ ನಡೆಯಲಿದೆ ಎನ್ನಲಾಗುತ್ತಿದ್ದು, ಈ ಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಯಡಿಯೂರಪ್ಪ ಸಭೆಗೂ ಮುನ್ನ ಸಮ್ಮಿಶ್ರ ಸರ್ಕಾರದ ವಿರುದ್ಧ ತಾವು ಸತ್ಯಾಗ್ರಹ ಮಾಡುವುದಾಗಿ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ರಾಜ್ಯದ ಬರ ನಿರ್ವಹಣೆಯಲ್ಲಿ ಸಮ್ಮಿಶ್ರ ಸರ್ಕಾರ ವಿಫಲವಾಗಿದೆ. ಅಭಿವೃದ್ಧಿ ಎಂಬುದು ನಿಂತ ನೀರಾಗಿದೆ. ಅಲ್ಲದೆ ಜಿಂದಾಲ್​ ಕಂಪೆನಿಗೆ ನಿಯಮ ಬಾಹೀರವಾಗಿ ಭೂಮಿ ಹಂಚಿಕೆ ಮಾಡಲಾಗುತ್ತಿದೆ. ಸರ್ಕಾರದ ಈ ಕ್ರಮವನ್ನು ಖಂಡಿಸಿ ಶುಕ್ರವಾರದಿಂದ ಬಿಜೆಪಿ  2 ದಿನ ಹಗಲು ರಾತ್ರಿ ಸತ್ಯಾಗ್ರಹ ನಡೆಸಲಿದೆ. ಈ ಪ್ರತಿಭಟನೆಯಲ್ಲಿ ಬಿಜೆಪಿ ಪಕ್ಷದ ಎಲ್ಲಾ ಜನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ದೆಹಲಿಯಲ್ಲಿ ಅಮಿತ್ ಶಾ ನೇತೃತ್ವದಲ್ಲಿ ದೆಹಲಿಯಲ್ಲಿ ಇಂದು ನಡೆಯುತ್ತಿರುವ ಸಭೆಯಲ್ಲಿ ಯಡಿಯೂರಪ್ಪ ಲೋಕಸಭೆಯಲ್ಲಿ ರಾಜ್ಯದ ಜಿಲ್ಲಾವಾರು ಸಾಧನೆಯ ವರದಿಯನ್ನು ಮಂಡಿಸಲಿದ್ದಾರೆ. ಅಲ್ಲದೆ ಕಾಂಗ್ರೆಸ್ ಪಕ್ಷದ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಮಾಜಿ ಸಚಿವ ರೋಷನ್​ ಬೇಗ್ ಬಿಜೆಪಿ ಸೇರ್ಪಡೆಯಾಗುವ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಕುರಿತು ಪ್ರಶ್ನೆಗೆ ಮಾತ್ರ ಯಡಿಯೂರಪ್ಪ ಪ್ರತಿಕ್ರಿಯೆ ನೀಡಲಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ