ಸರ್ಕಾರದ ಅಭದ್ರತೆ ಬಗ್ಗೆ ತಲೆಕೆಡಿಸಿಕೊಳ್ಳದೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೆಕು-ಡಿಸಿಎಂ ಡಾ.ಜಿ.ಪರಮೇಶ್ವರ್

ಬೆಂಗಳೂರು,ಜೂ.12-ರಾಜ್ಯ ಸರ್ಕಾರದ ಅಭದ್ರತೆ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಳ್ಳದೆ ಕಾರ್ಯ ನಿರ್ವಹಿಸಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸೂಚಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ಆರಂಭವಾದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್ ಸರ್ಕಾರ ಸುಭದ್ರವಾಗಿಲ್ಲ ಎಂದು ಅಧಿಕಾರಿಗಳು ಮಾತನಾಡಿಕೊಳ್ಳುವುದು ನನ್ನ ಗಮನಕ್ಕೆ ಬಂದಿದೆ. ಮಾತನಾಡಿಕೊಂಡಿರುವುದನ್ನೂ ಕೇಳಿದ್ದೇನೆ. ಅವರ ಹೆಸರು ಕೂಡ ಹೇಳಬಲ್ಲೆ. ಆದರೆ ಸರ್ಕಾರದ ಅಭದ್ರತೆ ವಿಚಾರ ನಿಮ್ಮ ತಲೆಯಲ್ಲಿ ಬರಬಾರದು. ಅದೇನಿದ್ದರೂ ನಮಗೆ ಬಿಟ್ಟುಬಿಡಿ ನಾವು ನಿರ್ವಹಿಸುತ್ತೇವೆ. ಸರ್ಕಾರ ಭದ್ರಗೊಳಿಸುವುದನ್ನು ನಾವು ಮಾಡುತ್ತೇವೆ. ಅದು ನಿಮ್ಮ ಕೆಲಸವಲ್ಲ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸರ್ಕಾರ ಸ್ಥಿರವಾಗಿದ್ದು, ಪ್ರಗತಿಪರ ಸರ್ಕಾರವಾಗಿದೆ.ಸರ್ಕಾರದ ಬಗ್ಗೆ ಯಾವುದೇ ಅನುಮಾನ ಬೇಡ.ಒಂದು ವೇಳೆ ಅಂಥ ಅನುಮಾನ ಬಂದರೆ ಅದು ಆಡಳಿತದ ಮೇಲೆ ಪರಿಣಾಮ ಬೀರುತ್ತದೆ. ಹೊರರಾಜ್ಯಗಳಿಂದ ಬಂದಿರುವಂತಹ ಅಧಿಕಾರಿಗಳನ್ನು ನಾವು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇವೆ. ನಾವು ಪ್ರಮಾಣ ಮಾಡಿದಂತೆ ಕರ್ನಾಟಕದ ಜನತೆಗೆ ಉತ್ತಮ ಆಡಳಿತ ಕೊಡುತ್ತೇವೆ. ಅದಕ್ಕೆ ಪೂರಕವಾಗಿ ನೀವು ಕೆಲಸ ಮಾಡಿ ಎಂದು ಸೂಚಿಸಿದರು.

ಶೇ.90ರಷ್ಟು ಬಡವರಿದ್ದಾಯೆ- ಡಿಸಿಎಂ ಪ್ರಶ್ನೆ:
ರಾಜ್ಯದಲ್ಲಿ ಶೇ.90ರಷ್ಟು ಮಂದಿಗೆ ಬಿಪಿಎಲ್ ಪಡಿತರಚೀಟಿ ನೀಡಲಾಗಿದೆ. ಹಾಗಾದರೆ ಅಷ್ಟು ಮಂದಿ ಬಡವರಿದ್ದಾರೆಯೇ ಎಂದು ಪ್ರಶ್ನಿಸಿದರು. ನಮ್ಮದು ಪ್ರಗತಿಪರ ರಾಜ್ಯವಾಗಿದ್ದು, ಮಾಹಿತಿ ತಂತ್ರಜ್ಞಾನದ ರಾಜಧಾನಿ, ಜ್ಞಾನ ಹೊಂದಿರುವ ರಾಜಧಾನಿ ಎಂಬ ಖ್ಯಾತಿ ಪಡದಿದ್ದೇವೆ. ಶೇ.90ರಷ್ಟು ಬಿಪಿಎಲ್ ನೀಡಿದರೆ ರಾಷ್ಟ್ರಮಟ್ಟದಲ್ಲಿ ಏನು ಹೇಳುವುದು? ಅಷ್ಟು ಮಂದಿ ಬಡವರಿಲ್ಲ. ಪಡಿತರ ಚೀಟಿಯ ಮಾನದಂಡಗಳನ್ನು ಮರುಪರಿಶೀಲಿಸಬೇಕಿದೆ ಎಂದರು.

ಎಸ್‍ಎಂಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗಿ 28 ಸಾವಿರ ಕೋಟಿ ಬಜೆಟ್ ಗಾತ್ರವಾಗಿದೆ.ಈಗ 2.34 ಲಕ್ಷ ಕೋಟಿ ಏರಿಕೆಯಾಗಿದೆ.ಆದರೂ ಬಡವರ ಸಂಖ್ಯೆ ಇಳಿಕೆಯಾಗಿಲ್ಲ. ಎಸ್‍ಎಂಕೆ ಅವಧಿಯಲ್ಲೂ ಇದೇ ರೀತಿ ಬಿಪಿಎಲ್ ಚೀಟಿದಾರರ ಬಗ್ಗೆ ಪದೇ ಪದೇ ಸರ್ವೆ ಮಾಡಲಾಗಿತ್ತು ಎಂದು ಹೇಳಿದರು.

ರೈತರ ಆತ್ಮಹತ್ಯೆ ನಿಂತಿಲ್ಲ:
ರಾಷ್ಟ್ರೀಕೃತ ಬ್ಯಾಂಕ್‍ಗಳು ಸೇರಿದಂತೆ ರೈತರ 46 ಸಾವಿರ ಕೋಟಿ ರೂ. ಸಾಲವನ್ನು ಮನ್ನ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ. ದೇಶದ ಯಾವುದೇ ರಾಜ್ಯವು ಇಂಥ ಧೈರ್ಯ ಮಾಡಿಲ್ಲ. 40 ಸಾವಿರ ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆ ಮಾಡಿಕೊಂಡ ನಿದರ್ಶನವಿದೆ. ಬೇರೆಯವರಿಂದ ಒಂದು ಎಕರೆ ಜಮೀನು ಪಡೆದು ಬೆಳೆ ತೆಗೆಯಲಾಗಿದೆ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಯಿದೆ. ರಾಜ್ಯದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದರೆ ಆತ್ಮಹತ್ಯೆ ನಿಂತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಇದ್ದರೂ ಕೂಡ ಆಡಳಿತ ಯಂತ್ರ ಚುರುಕ್ಕಾಗಿದ್ದು, ಚರಿತ್ರಾರ್ಹ ಬರಗಾಲವನ್ನು ಸಮರ್ಪಕವಾಗಿ ನಿರ್ವಹಿಸಲಾಗಿದೆ ಎಂದು ಅಧಿಕಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆಶ್ರಯ ಯೋಜನೆಯಡಿ ಬಡವರಿಗೆ ಮನೆ ಕಟ್ಟುವ ಕಾರ್ಯ ಚುರುಕುಗೊಳ್ಳಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಪರಿಶಿಷ್ಟ ಜಾತಿ/ಪಂಗಡದವರಿಗೆ ಕೊಳವೆಬಾವಿ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲು ಎರಡುಮೂರು ವರ್ಷ ಬೇಕಾಗುತ್ತದೆ. ಈ ರೀತಿ ವಿಳಂಬ ಧೋರಣೆ ಸರಿಯಲ್ಲ.

ಈ ಬಾರಿಯ ಮುಂಗಾರು ಮಳೆ ಕೂಡ ಕಡಿಮೆಯಾಗಲಿದೆ ಎಂಬ ಮುನ್ಸೂಚನೆ ಇದ್ದು, ಕೃಷಿ ಇಲಾಖೆ ರೈತರಿಗೆ ಗೊಬ್ಬರ ಮತ್ತು ಬಿತ್ತನೆ ಬೀಜ ಸಮರ್ಪಕವಾಗಿ ನೀಡಲು ಸಿದ್ದತೆ ಮಾಡಿಕೊಳ್ಳಬೇಕು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ