ಸಿಎಂ ಯೋಗಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್: ಬಂಧಿತ ಪತ್ರಕರ್ತನ ಬಿಡುಗಡೆಗೆ ಸುಪ್ರೀಂ ಆದೇಶ

ಲಖನೌ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹವಾಗಿ ಪೋಸ್ಟ್​ ಮಾಡಿದ್ದ ಪತ್ರಕರ್ತ ಪ್ರಶಾಂತ್​ ಕನೌಜಾ ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಸಿಎಂ ಯೋಗ್ ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. ಆದರೆ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್​ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶ ನೀಡಿದೆ. ಅಲ್ಲದೆ ಅವರನ್ನು ಬಂಧಿಸಲು ಕಾರಣವೇನು ಮತ್ತು ಯಾವ ನಿಬಂಧನೆಗಳಡಿ ಅವರನ್ನು ಬಂದಿಸಲಾಗಿದೆ ಎಂದು ನ್ಯಾಯಾಲಯ ಪ್ರಶ್ನೆ ಮಾಡಿದೆ.

ಪ್ರಶಾಂತ್​ ಕನೌಜ್​ ಬಂಧನದ ವಿರುದ್ಧ ಅವರ ಪತ್ನಿ ಜಗೀಶಾ ಅರೋರಾ ವಕೀಲರಾದ ನಿತ್ಯಾ ರಾಮಕೃಷ್ಣನ್​ ಮೂಲಕ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ಪ್ರಶಾಂತ್ ಅವರ ಪೋಸ್ಟ್​ನಲ್ಲಿ ಕಾನೂನು ಬಾಹಿರ ಹಾಗೂ ಅಸಾಂವಿಧಾನಕವಾಗಿರುವಂಥದ್ದು ಏನಿದೆಯೆಂದು ಅವರನ್ನು ಬಂಧಿಸಲಾಗಿದೆ ಎಂದು ಪ್ರಶ್ನಿಸಲಾಗಿತ್ತು. ಹಾಗೇ ಈ ಅರ್ಜಿಯನ್ನೂ ಕೂಡಲೇ ಪರಿಶೀಲನೆ ಮಾಡಬೇಕು ಎಂದೂ ಮನವಿ ಮಾಡಲಾಗಿತ್ತು.

ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ಅಜಯ್​ ರಸ್ಟೋಜಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಪ್ರಕರಣದ ವಿಚಾರಣೆ ನಡೆಸಿದ್ದು, ಪ್ರಶಾಂತ್​ ಬಿಡುಗಡೆಗೆ ಆದೇಶ ನೀಡಿದೆ.

ಮಹಿಳೆಯೋರ್ವಳು ತಾನು ಯೋಗಿ ಆದಿತ್ಯನಾಥ್​ ಅವರನ್ನು ಮದುವೆಯಾಗಲು ಬಯಸಿದ್ದು, ಅವರಿಗೆ ಕೂಡ ಪ್ರಪೋಸಲ್​ ಕಳಿಸಿದ್ದೇನೆ ಎಂದು ಮಾಧ್ಯಮದವರ ಎದುರು ಹೇಳುತ್ತಿರುವ ವಿಡಿಯೋವನ್ನು ಪ್ರಶಾಂತ್​ ತಮ್ಮ ಟ್ವಿಟರ್​, ಫೇಸ್​ಬುಕ್​ನಲ್ಲಿ ಶೇರ್​ ಮಾಡಿಕೊಂಡಿದ್ದರು. ಇದು ಮುಖ್ಯಮಂತ್ರಿ ಗೌರವಕ್ಕೆ ಧಕ್ಕೆ ಎಂದು ಪೊಲೀಸರು ಅವರನ್ನು ಬಂಧಿಸಿ ಎಫ್​ಐಆರ್​ ದಾಖಲಿಸಿದ್ದರು.

ಸುಪ್ರೀಂಕೋರ್ಟ್​ನಲ್ಲಿ ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳಲು ಸರ್ಕಾರ ಪ್ರಯತ್ನಿಸಿತು. ಪ್ರಶಾಂತ್ ಅವರಿಗೆ ಜಾಮೀನು ನೀಡಬೇಕು ಎಂದು ಪತ್ನಿ ಮಾಡಿದ್ದ ಮನವಿಯನ್ನು ಪರಿಗಣಿಸಬಾರದು. ದೂರುದಾರರು ಮೊದಲು ಹೈಕೋರ್ಟ್​ಗೆ ಹೋಗಬೇಕಿತ್ತು. ಹೈಕೋರ್ಟ್​ನಲ್ಲಿ ಮೊದಲ ವಿಚಾರಣೆಯಾಗಬೇಕು ಹೊರತು ಸುಪ್ರೀಂಕೋರ್ಟ್​ ನೇರವಾಗಿ ರಿಟ್​ ಅರ್ಜಿಯನ್ನು ಪರಿಗಣಿಸಬಾರದು ಎಂದು ವಾದಿಸಿತು.

ಅಲ್ಲದೆ ಈ ಪತ್ರಕರ್ತನ ಟ್ವಿಟರ್​ಗಳನ್ನು ಪರಿಶೀಲಿಸಿದಾಗ ಅದರಲ್ಲಿ ದೇವರು ಹಾಗೂ ಧರ್ಮದ ವಿರುದ್ಧವೂ ಪ್ರಚೋದನಕಾರಿ ಪೋಸ್ಟ್​ಗಳು ಇರುವುದು ಕಂಡುಬಂತು. ರಾಜಕಾರಣಿಗಳ ಮಾನಹಾನಿಯಾಗುವಂತಹ ಟ್ವೀಟ್​ಗಳನ್ನು ಮಾಡಿದ್ದಾರೆ. ಹಾಗಾಗಿ ಜಾಮೀನು ಕೊಡಬಾರದು ಎಂದು ಸರ್ಕಾರ ಹೇಳಿತ್ತು.

ಯುಪಿ ಸರ್ಕಾರದ ಈ ವಾದಕ್ಕೆ ತಿರುಗೇಟು ಕೊಟ್ಟ ಸುಪ್ರೀಂ, ಇಂಥ ಪ್ರಕರಣದಲ್ಲಿಯೂ 11 ದಿನಗಳ ಕಾಲ ಜೈಲಿನಲ್ಲಿ ಇರಬೇಕಾ? ಅದು ನ್ಯಾಯೋಚಿತವಲ್ಲ. ಹಾಗಂತ ನಾವೇನೂ ಪತ್ರಕರ್ತನ ಪೋಸ್ಟ್​ ಒಳ್ಳೆಯದು ಎಂದು ಹೇಳುತ್ತಿಲ್ಲ. ಪತ್ರಕರ್ತ ಹಾಕಿದ್ದ ಪೋಸ್ಟ್​, ಟ್ವೀಟ್​ ಬಗ್ಗೆ ಹೆಚ್ಚಿಗೆ ಕಾಮೆಂಟ್​ ಮಾಡುವ ಅಗತ್ಯ ನಮಗಿಲ್ಲ. ಆದರೆ ಅಲ್ಲಿ ಅವರ ಸ್ವಾತಂತ್ರ್ಯ ಹರಣವಾಗಿದೆಯಾ ಎಂಬುದು ನಮ್ಮ ಪ್ರಶ್ನೆ. ಅದಕ್ಕೆ ಉತ್ತರ ಹೌದು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಭಾರತದ ಸಂವಿಧಾನದಡಿಯಲ್ಲಿ ಬರುವ ಆರ್ಟಿಕಲ್​ 19 ಹಾಗೂ 21 ಇವರೆಡೂ ಮನುಷ್ಯನ ವೈಯಕ್ತಿಕ ಹಕ್ಕನ್ನು ಸಾರುತ್ತವೆ. ಇದನ್ನು ಪರಿವರ್ತಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಕೂಡಲೇ ಆತನನ್ನು ಬಿಡುಗಡೆ ಮಾಡುವಂತೆ ಸೂಚಿಸಿದೆ.

Supreme Court tells UP govt to release journalist Prashant Kanojia, asks ever heard of such arrests

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ