ಭಯೋತ್ಪಾದಕ ದಾಳಿಗಳಿಂದ ಶ್ರೀಲಂಕರನ್ನು ಭಯಪಡಿಸಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

ಕೊಲಂಬೋ: ಹೇಡಿ ಭಯೋತ್ಪಾದಕ ದಾಳಿಗಳಿಂದ ಶ್ರೀಲಂಕರನ್ನು ಭಯಪಡಿಸಲು ಸಾಧ್ಯವಿಲ್ಲ. ಇದರ ವಿರುದ್ಧ ಶ್ರೀಲಂಕಾ ಜನತೆ ಧೈರ್ಯದಿಂದ ಪುಟಿದೆದ್ದು ಬರುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ಮೋದಿ ವಿಶ್ವಾಸವ್ಯಕ್ತಪಡಿಸಿದ್ದಾರೆ.

ಎರಡನೇ ಬಾರಿ ಪ್ರಧಾನಿ ಪಟ್ಟಕ್ಕೇರಿರುವ ನರೇಂದ್ರ ಮೋದಿ ಮಾಲ್ಡೀವ್ಸ್ ಭೆಟಿ ಬಳಿಕ ಇಂದು ಶ್ರೀಲಂಕಾಕ್ಕೆ ತೆರಳಿದ್ದಾರೆ. ಈ ವೇಳೆ ಈಸ್ಟರ್​ ಬಾಂಬ್​ ದಾಳಿಗೆ ತುತ್ತಾಗಿದ್ದ ಚರ್ಚ್​ಗೆ ಭೇಟಿ ನೀಡಿದರು.

ಈಸ್ಟರ್​ ಭಾನುವಾರದಂದು ಉಗ್ರರು ನಡೆಸಿದ್ದ ಆತ್ಮಾಹುತಿ ದಾಳಿಯಿಂದ ಅಲ್ಲಿ 11 ಜನ ಭಾರತೀಯರೂ ಸೇರಿ 250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಈ ದುರ್ಘಟನೆ ನಡೆದ ಬಳಿಕ ಕೊಲಂಬೋಕ್ಕೆ ಭೇಟಿ ನೀಡಿದ ವಿದೇಶಿ ನಾಯಕರಲ್ಲಿ ನರೇಂದ್ರ ಮೋದಿ ಮೊದಲನೆಯವರಾಗಿದ್ದಾರೆ.

ಕೊಲಂಬೋಕ್ಕೆ ಆಗಮಿಸಿದ ನರೇಂದ್ರ ಮೋದಿಯವರನ್ನು ಶ್ರೀಲಂಕಾ ಪ್ರಧಾನಿ ರನಿಲ್​ ವಿಕ್ರಮಸಿಂಘೆ ಅವರು ಸ್ವಾಗತಿಸಿದರು. ನಂತರ ಈಸ್ಟರ್​ ಬಾಂಬ್​ ದಾಳಿಗೆ ತುತ್ತಾಗಿರುವ ಕೊಚಿಕಡೆ ಸೇಂಟ್​ ಆಂಥೋನಿ ಚರ್ಚ್​ಗೆ ತೆರಳಿ ಅಲ್ಲಿ ಬಿಳಿ ಹೂವುಗಳ ಗುಚ್ಛ ಇಡುವ ಮೂಲಕ ಗೌರವ ಸಲ್ಲಿಸಿದರು.

ಈ ವೇಳೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕೊಲಂಬೋದ ಕೊಚ್ಚಿಕಾಡ್ ನ ಸೈಂಟ್ ಆಂಥೊನಿ ಚರ್ಚ್ ಗೆ ಭೇಟಿ ನೀಡಿ ಅಗಲಿದ ನಾಗರಿಕರಿಗೆ ಗೌರವ ನಮನ ಸಲ್ಲಿಸುವ ಮೂಲಕ ಪ್ರಾರಂಭಿಸಿದೆ. ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಜನರಿಗೆ ನನ್ನ ಸಂತಾಪಗಳು ಮತ್ತು ಅವರ ಕುಟುಂಬವರ್ಗದವರಿಗೆ ಸಾಂತ್ವನಗಳು ಎಂದು ಹೇಳಿದ್ದಾರೆ.

ಅಲ್ಲದೇ ಈ ರೀತಿಯ ಹೇಡಿ ಭಯೋತ್ಪಾದಕ ದಾಳಿಗಳಿಂದ ಶ್ರೀಲಂಕರನ್ನು ಭಯಪಡಿಸಲು ಸಾಧ್ಯವಿಲ್ಲ. ಇದರ ವಿರುದ್ಧ ಶ್ರೀಲಂಕಾ ಮಂದಿ ಧೈರ್ಯದಿಂದ ಪುಟಿದೆದ್ದು ಬರುತ್ತಾರೆ ಎಂಬ ವಿಶ್ವಾಸ ನನಗಿದೆ. ಶ್ರೀಲಂಕಾ ಜನರೊಂದಿಗೆ ಭಾರತ ನಿಲ್ಲುತ್ತದೆ. ನಾವು ಐಕ್ಯಮತವನ್ನು ಸಾರುತ್ತೇವೆ ಎಂದು ಹೇಳಿದ್ದಾರೆ.

ನರೇಂದ್ರ ಮೋದಿಯವರು ಇಂದು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಹಾಗೂ ಪ್ರಧಾನಿ ರನಿಲ್​ ವಿಕ್ರಮಸಿಂಘೆಯವರೊಂದಿಗೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಈ ವೇಳೆ ಸಾಗರ ಪ್ರದೇಶಗಳ ರಕ್ಷಣಾ ಸಹಕಾರ, ಆರ್ಥಿಕತೆ ಮತ್ತು ಅಭಿವೃದ್ಧಿ ಸಹಾಯ ಮತ್ತು ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ನಿಕಟಗೊಳಿಸುವ ನಿಟ್ಟಿನಲ್ಲಿ ಉಭಯ ನಾಯಕರು ಮಾತುಕತೆ ನಡೆಸಲಿದ್ದಾರೆ. ವಿಶೇಷ ಭೋಜನ ಏರ್ಪಡಿಸಲಾಗಿದ್ದು, ಅದರಲ್ಲಿ ಶ್ರೀಲಂಕಾ ಸರ್ಕಾರ ಸಂಪುಟದ ಸಚಿವರು, ಪ್ರಾಂತೀಯ ಗವರ್ನರ್​ಗಳೂ ಪಾಲ್ಗೊಳ್ಳಲಿದ್ದಾರೆ.

ಪ್ರತಿಪಕ್ಷ ನಾಯಕ ಮಹಿಂದಾ ರಾಜಪಕ್ಸ ಅವರನ್ನೂ ಸಹ ನರೇಂದ್ರ ಮೋದಿ ಭೇಟಿಯಾಗಲಿದ್ದಾರೆ. ಹಾಗೇ ಶ್ರೀಲಂಕಾದಿಂದ ಇಂದು ಮಧ್ಯಾಹ್ನ ಹೊರಡಿಲಿರುವ ಅವರು, ಅದಕ್ಕೂ ಮೊದಲು ಅಲ್ಲಿ ವಾಸವಾಗಿರುವ ಭಾರತೀಯ ಸಮುದಾಯದವರನ್ನೂ ಭೇಟಿಯಾಗಲಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ