ಇನ್ನೂ ಪತ್ತೆಯಾಗದ ಎಎನ್​-32 ವಿಮಾನ; ಮುಂದುವರೆದ ಶೋಧ ಕಾರ್ಯ

ಗುವಾಹತಿ: ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆ ಎಎನ್​-32 ವಿಮಾನ ಇನ್ನೂ ಪತ್ತೆಯಾಗಿಲ್ಲ. ಸೋಮವಾರ ಮಧ್ಯಾಹ್ನ ನಾಪತ್ತೆಯಾಗಿರುವ ವಿಮಾನದ ಶೋಧಕಾರ್ಯ ನಾಲ್ಕನೇ ದಿನವಾದ ಇಂದು ಕೂಡ ಮುಂದುವರೆದಿದೆ.

ಭಾರತೀಯ ವಾಯುಪಡೆ ಮತ್ತು ಅಸ್ಸಾಂ, ಅರುಣಾಚಲ ಪ್ರದೇಶ ಸರ್ಕಾರಗಳು ವಿಮಾನ ಪತ್ತೆ ಮತ್ತು ರಕ್ಷಣಾ ಕಾರ್ಯ ನಡೆಸುತ್ತಿವೆ. ಉಪಗ್ರಹ ಮತ್ತು ಇತರೆ ಅತ್ಯಾಧುನಿಕ ಸಾಧನಗಳು, ಸುಖೋಯ್​-30 ಯುದ್ಧ ವಿಮಾನ, ಸಿ-130 ಜೆ ವಿಮಾನ, ಎಂಐ-17 ಹೆಲಿಕಾಪ್ಟರ್​ ಬಳಸಿ ವಿಮಾನ ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ.

ಅಸ್ಸಾಂನ ಜೊರಾಹಟ್ ವಾಯುನೆಲೆಯಿಂದ ಸೋಮವಾರ ಮಧ್ಯಾಹ್ನ 12.25ಕ್ಕೆ ಟೇಕ್​ಆಫ್ ಆಗಿದ್ದ ಈ ವಿಮಾನ 1.30ರ ಸುಮಾರಿಗೆ ಭಾರತ-ಚೀನಾ ಗಡಿಯಿಂದ 30 ಕಿ.ಮೀ. ದೂರದಲ್ಲಿರುವ ಅರುಣಾಚಲಪ್ರದೇಶದ ಮೆಚುಕು ಅಡ್ವಾನ್ಸ್ ಲ್ಯಾಂಡಿಗ್ ಗ್ರೌಂಡ್​ಗೆ ತಲುಪಬೇಕಿತ್ತು. ಆದರೆ, ಮಧ್ಯಾಹ್ನ 1 ಗಂಟೆ ವೇಳೆಗೆ ನಿಯಂತ್ರಣಾ ಕೇಂದ್ರದ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿದೆ.

ಬುಧವಾರ ಬೆಳಗ್ಗೆ ಪ್ರತಿಕೂಲ ಹವಾಮಾನದಿಂದಾಗಿ ಶೋಧ ಕಾರ್ಯವನ್ನು ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು. ಆ ನಂತರ ಮತ್ತೆ ಶೋಧ ಕಾರ್ಯ ಪ್ರಾರಂಭಿಸಲಾಗಿತ್ತು. ಗುರುವಾರ ಬೆಳಗ್ಗೆ ಮತ್ತೆ ಶೋಧ ಕಾರ್ಯ ಪ್ರಾರಂಭಗೊಂಡಿದೆ. ಹವಾಮಾನವನ್ನು ಆಧರಿಸಿ ವಿಮಾನ ಮತ್ತು ಹೆಲಿಕಾಪ್ಟರ್​ಗಳನ್ನು ಶೋಧ ಕಾರ್ಯಕ್ಕೆ ಬಳಸಲಾಗುವುದು ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.

Search operations, for missing AN-32 aircraft, forth day

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ