ಕೇರಳದಲ್ಲಿ ನಿಫಾ ವೈರಸ್ ಪತ್ತೆ ಹಿನ್ನೆಲೆ​; ರಾಜ್ಯದಲ್ಲೂ ಹೈ ಅಲರ್ಟ್​ ಘೋಷಣೆ

ಬೆಂಗಳೂರುನೆರೆಯ ರಾಜ್ಯ ಕೇರಳದಲ್ಲಿ ಕಾಣಿಸಿಕೊಂಡಿರುವ ನಿಫಾ ವೈರಸ್​​ ಈಗ ಎಲ್ಲೆಡೆ ಆತಂಕ ಸೃಷ್ಟಿಸಿದೆ . ಹೀಗಾಗಿ ಕರ್ನಾಟಕದಲ್ಲಿಯೂ ಹೈ ಅಲರ್ಟ್​ ಘೋಷಣೆ ಮಾಡಲಾಗಿದೆ.

ಕೇರಳದಲ್ಲಿ ಕಳೆದ ವರ್ಷ 17 ಪ್ರಕರಣಗಳು  ದಾಖಲಾಗಿತ್ತು. ಈ ವರ್ಷ ಕೇರಳದ 5 ಮಂದಿಯಲ್ಲಿ ನಿಫಾ ವೈರಸ್​​ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಹೈ ಅಲರ್ಟ್​ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಪ್ರವಾಸಿಗರು ಕೇರಳಕ್ಕೆ ಹೋಗುವುದನ್ನು ಆದಷ್ಟು ತಡೆಗಟ್ಟುವುದು ಒಳಿತು ಎಂದು ತಿಳಿಸಲಾಗಿದೆ.

ಕೇರಳಕ್ಕೆ ಹೊಂದಿಕೊಂಡಿರುವ 8 ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಸೇರಿದತೆ 8 ಜಿಲ್ಲೆಗಳಲ್ಲಿ ನಿಗಾ ವಹಿಸಲಾಗಿದೆ. ಅಲ್ಲದೆ ಪ್ರತಿದಿನ ವೈದ್ಯಕೀಯ ವರದಿ ನೀಡಲು ಸರ್ಕಾರ ಸೂಚಿಸಿದೆ. ಒಂದು ವೇಳೆ ನಿಫಾ ಸೋಂಕು ಪತ್ತೆಯಾದಲ್ಲಿ ಅವರನ್ನು ಜನರಿಂದ ಪ್ರತ್ಯೇಕಿಸಲು ಸೂಚಿಸಲಾಗಿದೆ.  

ಬಾವಲಿ ತಿಂದು ಬಿಟ್ಟ ಹಣ್ಣಿನ ಬಗ್ಗೆ ಎಚ್ಚರಿಕೆ ಇರಲಿ. ಈ ಸಮಯದಲ್ಲಿ ಕೇರಳಕ್ಕೆ ಹೋಗುವುದು ಬೇಡ. ಕೇರಳದ ಗಡಿ ಪ್ರದೇಶಗಳಲ್ಲಿ ನಿಗಾ ವಹಿಸುವಂತೆ ಆದೇಶಿಸಲಾಗಿದೆ. ಸದ್ಯ ನಿಫಾ ವೈರಸ್ ಬಗ್ಗೆ ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಇಲಾಖೆಯ ಉಪ ನಿರ್ದೇಶಕ ಡಾ.ಬಿ.ಜಿ.ಪ್ರಕಾಶ್ ಕುಮಾರ್ ತಿಳಿಸಿದ್ದಾರೆ.

ಆಸ್ಪತ್ರೆಗಳಲ್ಲಿ ಪ್ರತ್ಯೇಕ ಬೆಡ್ ವ್ಯವಸ್ಥೆ ಮಾಡಬೇಕು. ಜೊತೆಗೆ ತಮಿಳುನಾಡಿನ ಊಟಿ, ನೀಲಗಿರಿ, ಕನ್ಯಾಕುಮಾರಿ, ಕೊಯಮುತ್ತೂರು, ದಿಂಡಿಗಲ್, ತಿರುವನ್ವೇಲಿ, ತೇಣಿಯಲ್ಲೂ ಕಟ್ಟೆಚ್ಚರ ಘೋಷಿಸಲಾಗಿದೆ. ಒಟ್ಟಿನಲ್ಲಿ ಮತ್ತೆ ನಿಫಾ ವೈರಸ್ ಭೀತಿ ಸೃಷ್ಟಿಸಿದ್ದು, ಎರ್ನಾಕುಲಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿರುವ ಕಾಲೇಜು ವಿದ್ಯಾರ್ಥಿಯಲ್ಲಿ ಈ ವೈರಸ್ ಪತ್ತೆಯಾಗಿದೆ. ಹಾಗಾಗಿ ರಾಜ್ಯದ ಗಡಿಭಾಗದಲ್ಲಿ ಭಾರೀ ನಿಗಾ ವಹಿಸಲಾಗಿದೆ. ಕೇರಳದಲ್ಲಿ ಮಾರಕ ರೋಗ ನಿಫಾ ಪತ್ತೆ ಹಿನ್ನಲೆ ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಕೇರಳ ಕೊಡಗು ಗಡಿ ಭಾಗದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಕೊಡಗು ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. ಕೇರಳದಿಂದ ಕೊಡಗಿಗೆ ಹೆಚ್ಚು ಜನ ಬರುವ ಹಿನ್ನೆಲೆ, ನಿಫಾ ಬಗ್ಗೆ ಆರೋಗ್ಯ ಇಲಾಖೆಯಿಂದ ಜಾಗೃತಿ ಮೂಡಿಲಾಗುತ್ತಿದೆ. ನಿಫಾ ಲಕ್ಷಣ ಕಂಡುಬಂದರೆ ತಕ್ಷಣ ತಿಳಿಸಲು ಸೂಚನೆ ನೀಡಲಾಗಿದೆ. ನಿಫಾ ಹರಡದಂತೆ ತಡೆಗಟ್ಟಲು ಸಹಕರಿಸಲು ಆರೋಗ್ಯಾಧಿಕಾರಿಗಳು  ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ