ಮಾಜಿ ಪಿಎಂ ದೇವೇಗೌಡರ ಸೋಲಿಗೆ ನಾನು ಕಾರಣನಲ್ಲ-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜೂ.5- ತುಮಕೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸೋಲಿಗೆ ನಾನು ಕಾರಣನಲ್ಲ. ಸ್ಪರ್ಧಿಸಿದವರು ಅವರು, ಪ್ರಚಾರ ಮಾಡಿದವರು ಅವರ ಪಕ್ಷದವರು,ಹೀಗಿರುವಾಗ ನಾನು ಹೇಗೆ ಅವರ ಸೋಲಿಗೆ ಕಾರಣನಾಗುತ್ತೇನೆ ಎಂದು ಸಿದ್ದರಾಮಯ್ಯ ಇಂದಿಲ್ಲಿ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದೇವೇಗೌಡರ ಸೋಲಿಗೆ ಕಾರಣ ಎನ್ನುವುದಾದರೆ ಮೈಸೂರಿನಲ್ಲಿ ನಮ್ಮ ಪಕ್ಷದ ಕ್ಯಾಂಡಿಡೇಟ್ ವಿಜಯ್‍ಶಂಕರ್ ಅವರ ಸೋಲಿಗೆ ಯಾರು ಕಾರಣ?ಎಂದು ಪ್ರಶ್ನಿಸಿದರಲ್ಲದೆ, ಅವರವರ ಸೋಲಿಗೆ ಅವರವರೇ ಪ್ರಶ್ನೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ತಮ್ಮ ವಿರುದ್ಧ ಗುಡುಗಿರುವ ರೋಷನ್ ಬೇಗ್ ಅವರ ಬಗ್ಗೆ ಮಾತನಾಡಲು ನಿರಾಕರಿಸಿದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರು ನಮ್ಮ ಪಕ್ಷದವರೇ ಅಲ್ಲ, ಹೀಗಿರುವಾಗ ಅವರ ಹೇಳಿಕೆಗಳಿಗೆ ಉತ್ತರ ನೀಡುತ್ತಾ ಕೂರಲು ಸಾಧ್ಯವಿಲ್ಲ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಮೂಲ ಹಾಗೂ ವಲಸಿಗ ಎಂಬ ಪ್ರಶ್ನೆಯೇ ಇಲ್ಲ. ಎಲ್ಲರೂ ಒಗ್ಗೂಡಿ ಕಾಂಗ್ರೆಸ್ ಪಕ್ಷದವರು ಅಷ್ಟೇ. ಹೀಗಾಗಿ ಬೇರೆ ಮಾತನಾಡುವ ಅಗತ್ಯವಿಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ