ಉತ್ತರಪ್ರದೇಶ ಉಪಚುನಾವಣೆಯಲ್ಲಿ ಬಿ ಎಸ್ ಪಿ ಸ್ವತಂತ್ರ ಸ್ಪರ್ಧೆ

ಲಖನೌ: ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ (ಎಸ್ ಪಿ) ಜತೆ ಮೈತ್ರಿ ಮಾಡಿಕೊಂಡಿದ್ದ ಬಿಎಸ್ ಪಿ, ಸಂಘಟಿತ ಹೋರಾಟ ನಿರೀಕ್ಷಿತ ಫಲ ನೀಡದ ಹಿನ್ನೆಲೆಯಲ್ಲಿ ವಿಧಾನಸಭೆ ಉಪಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದೆ.

ಈ ಕುರಿತು ಬಿ ಎಸ್ ಪಿ ಮುಖ್ಯಸ್ಥೆ ಮಾಯಾವತಿ ಮಾತನಾಡಿದ್ದು, ಉತ್ತರ ಪ್ರದೇಶ ವಿಧಾನಸಭೆಯ 11 ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಯಾದವ ಸಮುದಾಯದವರು ಸಮಾಜವಾದಿ ಪಕ್ಷಕ್ಕೆ ಬೆಂಬಲ ನೀಡಲಿಲ್ಲ. ಎಸ್​ಪಿಯ ಅತ್ಯಂತ ಪ್ರಬಲ ಅಭ್ಯರ್ಥಿಗಳೂ ಸೋಲನುಭವಿಸಿದ್ದಾರೆ. ನಾವು ಶಾಶ್ವತವಾಗಿ ಬೇರೆಯಾಗುತ್ತಿಲ್ಲ. ಭವಿಷ್ಯದಲ್ಲಿ ನಾವು ಮತ್ತೆ ಒಟ್ಟಾಗಿ ಕೆಲಸ ಮಾಡಬಹುದು. ಅದು ಫಲನೀಡದಿದ್ದರೆ ನಾವು ಪ್ರತ್ಯೇಕವಾಗಿ ಕಾರ್ಯನಿರ್ವಹಿಸಬೇಕು. ಹಾಗಾಗಿ ಈ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಎಸ್​ಪಿ ಮತ್ತು ಬಿಎಸ್​ಪಿ ಮಧ್ಯೆ ಮೈತ್ರಿ ಏರ್ಪಟ್ಟ ದಿನದಿಂದಲೂ ಎಸ್​ಪಿ ಅಧ್ಯಕ್ಷ ಅಖಿಲೇಶ್​ ಯಾದವ್​ ಮತ್ತು ಅವರ ಪತ್ನಿ ಡಿಂಪಲ್​ ಯಾದವ್​ ನನಗೆ ಅಪಾರ ಗೌರವ ನೀಡಿದ್ದಾರೆ. ದೇಶಕ್ಕಾಗಿ ನಮ್ಮ ನಡುವಿನ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತಿದ್ದೆವು. ನಮ್ಮ ನಡುವಿನ ಸಂಬಂಧ ಕೇವಲ ರಾಜಕೀಯಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಮುಂದೆಯೂ ನಮ್ಮ ನಡುವಿನ ಬಾಂಧವ್ಯದಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ಮಾಯಾವತಿ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಎಸ್​ಪಿ ಮತ್ತು ಬಿಎಸ್​ಪಿ ಮೈತ್ರಿಕೂಟ ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ 14 ಸ್ಥಾನ ಗೆದ್ದಿತ್ತು. ಇದರಲ್ಲಿ ಬಿಎಸ್​ಪಿ 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಎಸ್​ಪಿ ಕೇವಲ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.

Mayawati confirms BSP to contest Uttar Pradesh bypolls solo, clarifies break in alliance with SP ‘not permanent’

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ