ಸಂಕಷ್ಟದಲ್ಲಿದೆಯಾ ದೇಶದ ಆರ್ಥಿಕ ಸ್ಥಿತಿ? ಜಿಡಿಪಿ ಕುಂಠಿತ; 45 ವರ್ಷಗಳಲ್ಲೇ ಅತಿ ಹೆಚ್ಚು ನಿರುದ್ಯೋಗ

ನವದೆಹಲಿ: ಮೋದಿ ನೇತೃತ್ವದ ಎನ್​ಡಿಎ-2 ಸರ್ಕಾರ ತನ್ನದೇ ಕರ್ಮಫಲಗಳನ್ನ ಬಳುವಳಿಯಾಗಿ ಪಡೆದುಕೊಂಡಿದೆ. ಸಂಕಷ್ಟದ ಆರ್ಥಿಕ ಸ್ಥಿತಿಯಲ್ಲಿ ನೂತನ ಸರ್ಕಾರ ಮುಂದುವರಿಯುವುದು ಅನಿವಾರ್ಯವಾಗಿದೆ. ಜಿಡಿಪಿ ಅಭಿವೃದ್ಧಿ ದರವು ಜನವರಿಯ ತ್ರೈವಾಸಿಕ ಅವಧಿಯಲ್ಲಿ ನಿರೀಕ್ಷಿತ ಮಟ್ಟಕ್ಕೇರಲು ವಿಫಲವಾಗಿದೆ.

ಹಾಗೆಯೇ, ನಿರುದ್ಯೋಗ ಪ್ರಮಾಣವು ಕಳೆದ 45 ವರ್ಷಗಳಲ್ಲಿ ಗರಿಷ್ಠ ಮಟ್ಟಕ್ಕೆ ಏರಿದೆ. ಸರ್ಕಾರದ ಅಂಕಿ ಅಂಶವೇ ಇದನ್ನು ಸ್ಪಷ್ಟಪಡಿಸಿದೆ. ಚುನಾವಣೆಗೆ ಮುನ್ನ ವಿಪಕ್ಷಗಳು ನಿರುದ್ಯೋಗದ ಬಗ್ಗೆ ಮಾಡುತ್ತಿದ್ದ ಆರೋಪಗಳು ಸತ್ಯ ಎಂಬುದು ಸಾಬೀತಾಗಿದೆ.

2017-18ರ ಹಣಕಾಸು ವರ್ಷದಲ್ಲಿ ನಿರುದ್ಯೋಗ ದರವು ಶೇ. 6.1ಕ್ಕೆ ಏರಿದೆ ಎಂದು ಕೇಂದ್ರ ಅಂಕಿ-ಅಂಶ ಸಚಿವಾಲಯವು ಸ್ಪಷ್ಟಪಡಿಸಿದೆ. ಚುನಾವಣೆಗೂ ಮುನ್ನ ಜನವರಿಲ್ಲಿ ಪತ್ರಿಕೆಯೊಂದರಲ್ಲಿ ಸರ್ಕಾರದ ಅಂಕಿ-ಅಂಶವನ್ನೇ ಉಲ್ಲೇಖಿಸಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿರುವ ಬಗ್ಗೆ ವರದಿ ಪ್ರಕಟವಾಗಿತ್ತು. ಇದೀಗ ಸರಕಾರವೇ ಅಧಿಕೃತವಾಗಿ ಈ ಅಂಕಿ-ಅಂಶವನ್ನು ಹೊರಗೆಡವಿದೆ. ಆದರೆ, ನಿರುದ್ಯೋಗ ಪ್ರಮಾಣ ಪತ್ತೆಗೆ ಸರಕಾರ ಹೊಸ ವಿಧಾನ ಮತ್ತು ಮಾನದಂಡ ರೂಪಿಸಿರುವುದರಿಂದ ಈ ಅಂಕಿ-ಅಂಶ ಬಂದಿದೆ ಎಂದು ಕೇಂದ್ರ ಸರಕಾರ ಹೇಳಿಕೊಂಡಿದೆ.

ಅದೇನೇ ಇರಲಿ, 1972-73ರ ನಂತರ ನಿರುದ್ಯೋಗ ಪ್ರಮಾಣ ಗರಿಷ್ಠ ಮಟ್ಟ ತಲುಪಿರುವುದು ಇದೇ ಮೊದಲೆನ್ನಲಾಗಿದೆ.

ಇನ್ನು, ಜಿಡಿಪಿ ಅಭಿವೃದ್ಧಿ ದರ ಕೂಡ ಈ ತ್ರೈಮಾಸಿಕ ಅವಧಿಯಲ್ಲಿ ಕುಂಠಿತಗೊಂಡಿದೆ. ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ ಜಿಡಿಪಿ ಕೇವಲ ಶೇ. 5.8ರಷ್ಟು ಅಭಿವೃದ್ಧಿಯಾಗಿದೆ. ಇದು ನಿರೀಕ್ಷಿಸಿದ್ದಕ್ಕಿಂತ ತೀರಾ ಕಡಿಮೆಯಾಗಿದೆ. 2013-14ರಿಂದೀಚೆಗೆ ಇದು ಕನಿಷ್ಠ ಜಿಡಿಪಿ ಅಭಿವೃದ್ಧಿ ದರವೆನಿಸಿದೆ. ಕಳೆದ 2 ವರ್ಷಗಳಲ್ಲಿ ಚೀನಾಕ್ಕಿಂತಲೂ ಭಾರತದ ಜಿಡಿಪಿ ಅಭಿವೃದ್ಧಿ ದರ ಮೊದಲ ಬಾರಿಗೆ ಕಡಿಮೆಗೊಂಡಿದೆ.

ಬ್ಯಾಂಕೇತರ ಹಣಕಾಸು ವಲಯದಲ್ಲಿ ಸ್ವಲ್ಪ ಹಿನ್ನಡೆಯಾಗಿರುವುದು ಜಿಡಿಪಿ ಪ್ರಗತಿಯ ಮೇಲೆ ಋಣಾತ್ಮಕ ಪರಿಣಾಮ ಬೀರಿರುವ ಸಾಧ್ಯತೆ ಇದೆ. ವರ್ಷದ ಮೊದಲ ತ್ರೈಮಾಸಿಕದಲ್ಲಿ ಸಾಮಾನ್ಯವಾಗಿ ಜಿಡಿಪಿ ವೇಗ ಕಡಿಮೆ ಇರುತ್ತದೆ. ಎರಡನೇ ತ್ರೈಮಾಸಿಕದಲ್ಲಿ ಚೇತರಿಕೆ ಕಾಣುತ್ತೇವೆ ಎಂದು ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಎಸ್.ಸಿ. ಗರ್ಗ್ ಸ್ಪಷ್ಟನೆ ನೀಡಿದ್ದಾರೆ.

ಏಪ್ರಿಲ್-ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ ಮುಂದೆ ಪ್ರಬಲ ಸವಾಲುಗಳಿವೆ. ಮೊದಲ ಅವಧಿಗಿಂತ ಈ ಬಾರಿ ಹೆಚ್ಚು ಜಾಗರೂಕತೆಯಿಂದ ಹೆಜ್ಜೆ ಇಡುವ ನಿರೀಕ್ಷೆ ಇದೆ. ಜುಲೈ 5ರಂದು ಮಂಡನೆಯಾಗಲಿರುವ ಬಜೆಟ್​ನಲ್ಲಿ ಆರ್ಥಿಕ ಸುಧಾರಣೆಯತ್ತ ಸರ್ಕಾರದ ಮುಂದಿನ ದಾರಿಗಳೇನು ಎಂಬ ಸುಳಿವು ಸಿಗಬಹುದೆಂದು ನಿರೀಕ್ಷಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ