ಮೋದಿ ಕ್ಯಾಬಿನೆಟ್‍ನಲ್ಲಿ ಖಾತೆ ಹಂಚಿಕೆ ಸಸ್ಪೆನ್ಸ್- ಇಂದು ಸಂಜೆ ಮೊದಲ ಸಭೆ

ನವದೆಹಲಿ: 2ನೇ ಬಾರಿಗೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೋದಿಯವರ ಜೊತೆಗೆ 24 ಮಂದಿ ಸಂಪುಟ ದರ್ಜೆ ಸಚಿವರು, 9 ಮಂದಿ ಸ್ವತಂತ್ರ ಖಾತೆ ರಾಜ್ಯ ಸಚಿವರಾಗಿ, 24 ಮಂದಿ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡಾ ಪ್ರಮಾಣ ವಚನ ಸ್ವೀಕರಿಸೋ ಮೂಲಕ ಮೋದಿ ಸಂಪುಟ ಸೇರಿದ್ದಾರೆ. ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಸದಾನಂದ ಗೌಡ, ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯಲ್ ಸೇರಿದಂತೆ ಹಲವು ಹಳೆಮುಖಗಳನ್ನೂ ಮುಂದುವರಿಸಲಾಗಿದೆ.

ಆದರೆ ಸುಷ್ಮಾ ಸ್ವರಾಜ್, ಉಮಾಭಾರತಿ, ಸುರೇಶ್ ಪ್ರಭು, ಮೇನಕಾ ಗಾಂಧಿ ಸೇರಿದಂತೆ ಹಿಂದಿನ ಸಂಪುಟದಲ್ಲಿದ್ದ 37 ಮಂದಿಗೆ ಕೊಕ್ ನೀಡಲಾಗಿದೆ. ಜೆಡಿಯುನ ಒಬ್ಬರಿಗೆ ಮಾತ್ರವೇ ಪ್ರಮಾಣವಚನ ಸ್ವೀಕರಿಸಲು ಮೋದಿ ಆಹ್ವಾನ ಬಂದಿದ್ದರಿಂದ, ತಮ್ಮ ಪಕ್ಷದಿಂದ ಯಾರೂ ಪ್ರಮಾಣ ವಚನ ಸ್ವೀಕರಿಸಲ್ಲ ಎಂದು ನಿತೀಶ್ ಕುಮಾರ್ ತಿಳಿಸಿದರು. ಅಲ್ಲದೆ ಒಂದೇ ಸ್ಥಾನ ನೀಡಿರೋ ಬಿಜೆಪಿ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದು, ನಾವು ಎನ್‍ಡಿಎ ಭಾಗಿವಾಗಿಯೇ ಇರುತ್ತೇವೆ ಅಂತಲೂ ಸ್ಪಷ್ಟಪಡಿಸಿದ್ದಾರೆ.

ಇತ್ತ ಕ್ಯಾಬಿನೆಟ್ ನಲ್ಲಿ ಯಾರು ಯಾರಿಗೆ ಯಾವ್ಯವಾ ಖಾತೆ ನೀಡುತ್ತಾರೆ ಎಂಬ ಕುತೂಹಲವಿದ್ದು, ಸಂಜೆ 5 ಗಂಟೆಗೆ ಹೊಸ ಸರ್ಕಾರದ ಸಂಪುಟ ಸಭೆ ನಡೆಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ