ತರಾತುರಿಯಲ್ಲಿ ಯಾವುದೇ ನಿರ್ಧಾರ ಬೇಡ-ಮುಖ್ಯಮಂತ್ರಿಗೆ ಕಾಂಗ್ರೇಸ್ ನಾಯಕರ ಸಲಹೆ

ಬೆಂಗಳೂರು, ಮೇ 31-ಆಪರೇಷನ್ ಕಮಲದ ವಿಚಾರ ಬೂದಿ ಮುಚ್ಚಿದ ಕೆಂಡದಂತಿದ್ದರೂ ರಾಜ್ಯದ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನಾರಚನೆ ವಿಳಂಬವಾಗುವ ಸಾಧ್ಯತೆಗಳಿವೆ.

ಸದ್ಯಕ್ಕೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಆತಂಕ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ತರಾತುರಿಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವುದು ಬೇಡ.

ಅತೃಪ್ತರನ್ನು ಸಾಧ್ಯವಾದಷ್ಟು ಮಟ್ಟಿಗೆ ಸಮಾಧಾನ ಪಡಿಸುವ ಪ್ರಯತ್ನವನ್ನು ಮುಂದುವರೆಸೋಣ. ಅತೃಪ್ತ ಶಾಸಕರ ನಡೆ ವಿಕೋಪಕ್ಕೆ ಹೋದಂತಹ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳೋಣ ಎಂಬ ಕಾಂಗ್ರೆಸ್ ನಾಯಕರು ಸಲಹೆ ಮಾಡಿದ್ದು, ಅದಕ್ಕೆ ಮುಖ್ಯಮಂತ್ರಿ ಸಮ್ಮತಿಸಿದ್ದಾರೆ ಎನ್ನಲಾಗಿದೆ.

ಈ ನಡುವೆ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರನ್ನು ಭೇಟಿ ಮಾಡಿ ರಾಜ್ಯದ ಮೈತ್ರಿ ಸರ್ಕಾರದ ಬಗ್ಗೆ ಚರ್ಚೆ ನಡೆಸಿದ್ದು, ಸುಗಮವಾಗಿ ಸರ್ಕಾರ ಮುನ್ನಡೆಯುತ್ತಿದ್ದು, ರಾಜ್ಯ ಕಾಂಗ್ರೆಸ್ ನಾಯಕರು ಸೂಕ್ತ ಸಹಕಾರ ನೀಡುತ್ತಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಇದೇ ರೀತಿ ಸರ್ಕಾರವನ್ನು ಮುನ್ನಡೆಸಿಕೊಂಡು ಹೋಗುವಂತೆಯೂ ರಾಹುಲ್‍ಗಾಂಧಿ ಸಲಹೆ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈಗಾಗಲೇ ಆಡಳಿತ ಪಕ್ಷದ ಅತೃಪ್ತ ಶಾಸಕರು, ಆಪರೇಷನ್ ಕಮಲಕ್ಕೆ ಒಳಗಾಗುವುದನ್ನು ತಪ್ಪಿಸಲು ಉಭಯ ಪಕ್ಷಗಳ ನಾಯಕರು ಮುಂದಾಗಿದ್ದು, ಅತೃಪ್ತರಿಗೆ ಸೂಕ್ತ ಸ್ಥಾನಮಾನ ನೀಡಿ ಸಮಾಧಾನ ಪಡಿಸುವ ಪ್ರಯತ್ನವನ್ನು ನಡೆಸಿದ್ದಾರೆ. ಈ ನಡುವೆ ಉಭಯ ಪಕ್ಷಗಳ ನಾಯಕರು ಸರಣಿ ಸಭೆಗಳನ್ನು ನಡೆಸಿ ಮೈತ್ರಿ ಸರ್ಕಾರವನ್ನು ಉಳಿಸಿಕೊಂಡು ಮುನ್ನಡೆಸುವ ಬಗ್ಗೆ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಮೊದಲಿಗೆ ಸಂಪುಟ ವಿಸ್ತರಣೆ ಮಾಡಿ ಖಾಲಿ ಇರುವ 3 ಸಚಿವ ಸ್ಥಾನಗಳನ್ನು ಭರ್ತಿ ಮಾಡುವುದು, ಆನಂತರ ಸಂಪುಟ ಪುನಾರಚನೆ ಮಾಡುವ ಮೂಲಕ ಕೆಲವು ಸಚಿವರನ್ನು ಕೈಬಿಟ್ಟು, ಮತ್ತೆ ಕೆಲವು ಶಾಸಕರಿಗೆ ಅವಕಾಶ ಕಲ್ಪಿಸುವ ಬಗ್ಗೆಯೂ ಗಂಭೀರ ಚಿಂತನೆ ನಡೆಸಿದ್ದರು.

ನಿಗಮ -ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಅತೃಪ್ತ ಶಾಸಕರನ್ನು ಮನವೊಲಿಸುವ ಉದ್ದೇಶವನ್ನು ಮಿತ್ರಪಕ್ಷಗಳ ನಾಯಕರು ಹೊಂದಿದ್ದರು. ಆದರೆ ಸಂಪುಟ ವಿಸ್ತರಣೆಗೆ ಮುಂದಾದರೆ ಕಾಂಗ್ರೆಸ್‍ನಲ್ಲಿನ ಅತೃಪ್ತಿ ಮತ್ತಷ್ಟು ಭುಗಿಲೇಳುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಸಂಪುಟ ವಿಸ್ತರಣೆಯನ್ನು ವಿಳಂಬ ಮಾಡುವುದು ಸೂಕ್ತ ಎಂಬ ನಿರ್ಧಾರಕ್ಕೆ ದೋಸ್ತಿ ನಾಯಕರು ಬಂದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಅತೃಪ್ತ ಕಾಂಗ್ರೆಸ್ ಶಾಸಕರ ಒತ್ತಡ ಹೆಚ್ಚಾಗಿ ಮತ್ತೆ ಆಪರೇಷನ್ ಕಮಲದ ಭೀತಿ ಎದುರಾದರೆ ಜೂನ್ ಮೊದಲ ವಾರದಲ್ಲೇ ಸಂಪುಟ ವಿಸ್ತರಣೆ ಮಾಡುವ ಬಗ್ಗೆಯೂ ಗಂಭೀರ ಚಿಂತನೆ ನಡೆಸಿದ್ದಾರೆ. ಮೈತ್ರಿ ಸರ್ಕಾರಕ್ಕೆ ಎದುರಾಗಲಿರುವ ಗಂಡಾಂತರಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರೊಂದಿಗೆ ನಡೆಸಿರುವ ಮಾತುಕತೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಅವಕಾಶ ಕೊಡಬಾರದು. ಮಿತ್ರ ಪಕ್ಷಗಳ ನಡುವಿನ ಹಂಚಿಕೆಯಲ್ಲಿ ಸ್ವಲ್ಪ ಮಟ್ಟಿನ ಕೊಡು-ಕೊಳ್ಳುವಿಕೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುವ ನಿರ್ಧಾರಕ್ಕೂ ಬಂದಿದ್ದಾರೆ.

ಸಂಪುಟ ವಿಸ್ತರಣೆ ಹಾಗೂ ಸಂಪುಟ ಪುನಾರಚನೆ ಎರಡಕ್ಕೂ ಜೆಡಿಎಸ್ ಸಿದ್ಧವಿದ್ದರೂ ಕಾಂಗ್ರೆಸ್ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ. ಹೀಗಾಗಿ ಸಂಪುಟ ವಿಸ್ತರಣೆ ವಿಳಂಬವಾಗುವ ಸಾಧ್ಯತೆಗಳಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ