ಆಪರೇಷನ್ ಕಮಲ ಯಶಸ್ವಿಯಾಗಬಾರದು; ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಹುಲ್ ಖಡಕ್ ಸೂಚನೆ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸುತ್ತಿದ್ದಂತೆ ಆಪರೇಷನ್​ ಕಮಲದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಈ ವಿಚಾರ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರನ್ನು ಚಿಂತೆಗೀಡು ಮಾಡಿದ್ದು, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಆಪರೇಷನ್​ ಕಮಲ ನಡೆಯಬಾರದು ಎನ್ನುವ ಖಡಕ್​ ಸೂಚನೆ ನೀಡಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಯಾವುದೇ ಕಾರಣಕ್ಕೂ ರಚನೆ ಆಗಬಾರದು ಎನ್ನುವ ನಿರ್ದೇಶನವನ್ನು ರಾಜ್ಯ ನಾಯಕರಿಗೆ ರಾಹುಲ್​ ನೀಡಿದ್ದಾರೆ. ಜೊತೆಗೆ ಪಕ್ಷ‌ದ ಭವಿಷ್ಯದ ದೃಷ್ಟಿಯಿಂದ ಕೆಲವರು ಸಚಿವ ಸ್ಥಾನ ತ್ಯಾಗ‌ಮಾಡಲೇಬೇಕು ಎಂದಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ಕೆ.ಸಿ ವೇಣುಗೋಪಾಲ್ ಜೊತೆ ರಾಹುಲ್​ ಗಾಂಧಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ರಾಹುಲ್ ಸೂಚನೆ ಮೇರೆಗೆ ಕೆಸಿ ವೇಣುಗೋಪಾಲ್​ ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.

ಇಂದು ಸಂಜೆ ಬೆಂಗಳೂರಿನಲ್ಲಿ ಕೆಸಿ ವೇಣುಗೋಪಾಲ್​ ಮಹತ್ವದ ಸಭೆ ಕರೆದಿದ್ದಾರೆ. ಸಭೆಯಲ್ಲಿ ಅತೃಪ್ತರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಹಾಗೂ ಕೆಲ ಕೈ ಸಚಿವರ ರಾಜೀನಾಮೆ ವಿಚಾರದ ಕುರಿತು ಚರ್ಚೆಯಾಗಲಿದೆ.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿ ಕಾಂಗ್ರೆಸ್​ನ‌ ಎಲ್ಲಾ ಸಚಿವರು ಪಾಳ್ಗೊಳ್ಳಲಿದ್ದಾರೆ. ಈ ವೇಳೆ ಸ್ವ ಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವರಿಗೆ ಪಕ್ಷದಲ್ಲಿ ವಿಶೇಷ ಹುದ್ದೆ ನೀಡಲು ನಿರ್ಧರಿಸಲಾಗಿದೆ. ಈ ಮೂಲಕ ಅತೃಪ್ತರಿಗೆ ಸಚಿವ ಸ್ಥಾನ ನೀಡಿ ಸರ್ಕಾರ ಉಳಿಸಿಕೊಳ್ಳುವ ಆಲೋಚನೆ ಅವರದ್ದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ