ಮೋದಿ ಸರಕಾರದ ಪರ ಜನರ ಒಲವು: ಐಎಎನ್‌ಎಸ್‌ ಸಮೀಕ್ಷೆ

ಹೊಸದಿಲ್ಲಿ: ಲೋಕಸಭೆ ಚುನಾವಣೆಯ ಮೊದಲ 5 ಹಂತಗಳ ಮತದಾನದ ಅವಧಿಯಲ್ಲಿ ಬಿಜೆಪಿ ನೇತೃತ್ವದ ಆಡಳಿತಾರೂಢ ಎನ್‌ಡಿಎ ಸರಕಾರದ ಬಗ್ಗೆ ಜನತೆ ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಸಿವೋಟರ್‌-ಐಎಎನ್‌ಎಸ್‌ ಸಮೀಕ್ಷೆ ತಿಳಿಸಿದೆ.

ಕೊನೆಯ ಹಂತದ ಚುನಾವಣೆ ಮಾತ್ರ ಬಾಕಿ ಉಳಿದಿದ್ದು, ಮೇ 19ರಂದು ನಡೆಯಲಿದೆ. ಮಾಸಿಕ ಅಧಾರದಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಏಪ್ರಿಲ್‌ 9 ಮತ್ತು ಮೇ 9ರ ಅವಧಿಯಲ್ಲಿ ಲೋಕಸಭೆಗೆ ಮೊದಲ 5 ಹಂತಗಳ ಮತದಾನ ನಡೆದಿತ್ತು. ಮೇ 12ರಂದು 6ನೇ ಹಂತದ ಮತದಾನ ನಡೆದಿತ್ತು.

ಮೇ 9ರಂದು 11,250 ಮಂದಿಯನ್ನು ಸಂದರ್ಶಿಸಿ ನಡೆಸಿದ ಸಮೀಕ್ಷೆಯ ಪ್ರಕಾರ, ಶೇ.45.60 ಮಂದಿ, ಬಿಜೆಪಿ ಸರಕಾರದ ಬಗ್ಗೆ ಅತ್ಯಂತ ತೃಪ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ. ಶೇ.25.33 ಮಂದಿ ತಕ್ಕಮಟ್ಟಿಗೆ ತೃಪ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ. ಶೇ.27.37 ಮಂದಿ ಸರಕಾರದ ಸಾಧನೆಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಒಂದು ತಿಂಗಳಿನ ಹಿಂದೆ, ಏಪ್ರಿಲ್‌ 9ರಂದು ಶೇ.45.57 ಮಂದಿ, ಈಗಿನ ಎನ್‌ಡಿಎ ಸರಕಾರದ ಬಗ್ಗೆ ಅತ್ಯಂತ ತೃಪ್ತಿ ಹೊಂದಿರುವುದಾಗಿ ತಿಳಿಸಿದ್ದರು.

ಕಳೆದೊಂದು ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನಿರಂತರವಾಗಿ ಚುನಾವಣಾ ಪ್ರಚಾರ ನಡೆಸಿದ್ದರು. ಪ್ರತಿಪಕ್ಷಗಳೂ ಅಷ್ಟೇ ತೀವ್ರವಾಗಿ ಪ್ರಚಾರದಲ್ಲಿ ನಿರತವಾಗಿ ಸರಕಾರಕ್ಕೆ ಸವಾಲೆಸಿದಿದ್ದವು. ಹೀಗಿದ್ದರೂ, ಜನಪ್ರಿಯತೆ ಉಳಿಸಿಕೊಳ್ಳುವಲ್ಲಿ ಸರಕಾರ ಯಶಸ್ವಿಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ರಾಜ್ಯಗಳ ಪೈಕಿ ಛತ್ತೀಸ್‌ಗಢ, ಹರಿಯಾಣ, ಬಿಹಾರ ಮತ್ತು ಗುಜರಾತ್‌ನಲ್ಲಿ ಮತದಾರರು ಬಿಜೆಪಿ ಸರಕಾರದ ಪರ ಅತಿ ಗರಿಷ್ಠ ತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ.

ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಪಂಜಾಬ್‌ನಲ್ಲಿ ಕನಿಷ್ಠ ತೃಪ್ತಿ ಇದೆ. ಉಳಿದ ರಾಜ್ಯಗಳಲ್ಲಿ ಸರಕಾರದ ಪರ ತೃಪ್ತಿಯ ಮಟ್ಟ ಅಬಾಧಿತವಾಗಿ ಮುಂದುವರಿದಿದೆ ಎಂದು ಸಮೀಕ್ಷೆ ತಿಳಿಸಿದೆ.

ಈ ವರ್ಷ ಜನವರಿ 1ರಂದು ಕೇವಲ ಶೇ.36.35 ಮಂದಿ ಬಿಜೆಪಿ ಸರಕಾರದ ಪರ ಅತ್ಯಂತ ತೃಪ್ತಿ ಹೊಂದಿರುವುದಾಗಿ ತಿಳಿಸಿದ್ದರು. ಆದರೆ ಪಾಕಿಸ್ತಾನದ ಬಾಲಾಕೋಟ್‌ ಮೇಲೆ ವೈಮಾನಿಕ ದಾಳಿ ನಡೆಸಿ ಉಗ್ರರನ್ನು ಸಂಹರಿಸಿದ ಬಳಿಕ, ಮಾರ್ಚ್‌ ಮೊದಲ ವಾರದಲ್ಲಿ ಶೇ.60ರಷ್ಟು ಮಂದಿ ಸರಕಾರದ ಬಗ್ಗೆ ಅತ್ಯಂತ ತೃಪ್ತಿ ಹೊಂದಿರುವುದಾಗಿ ತಿಳಿಸಿದ್ದರು. ನಂತರ ಈ ಗರಿಷ್ಠ ತೃಪ್ತಿಯ ಪ್ರಮಾಣ ಮಾರ್ಚ್‌ ಮಧ್ಯಭಾಗದ ನಂತರ ಕಡಿಮೆಯಾಗಲು ಆರಂಭಿಸಿ ಮೇನಲ್ಲಿ ಶೇ.40ರ ಆಸುಪಾಸಿನಲ್ಲಿ ಸ್ಥಿರವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ