ದಿಗ್ವಿಜಯ್ ಸಿಂಗ್ ಅವರಿಗೆ ತಮ್ಮ ಹಕ್ಕು ಚಲಾಯ್ಸಬೇಕೆಂಬುದೂ ನೆನಪಾಗಲಿಲ್ಲ: ಪ್ರಧಾನಿ ವ್ಯಂಗ್ಯ

ರತ್ಲಾಂ: ಇಡೀ ರಾಷ್ಟ್ರ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಮಗ್ನವಾಗಿದ್ದರೆ ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್​ ಸಿಂಗ್​ ಅವರಿಗೆ ಮಾತ್ರ ತಮ್ಮ ಹಕ್ಕು ಚಲಾಯಿಸಬೇಕು ಎಂಬುದೂ ನೆನಪಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.

ಮಧ್ಯಪ್ರದೇಶದ ರತ್ಲಾಂನಲ್ಲಿ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸಂವಿಧಾನ ನೀಡಿರುವ ಹಕ್ಕು ಚಲಾಯಿಸಲು ಸ್ವತಃ ನಾನು ಅಹಮದಾಬಾದ್​ಗೆ ಹೋಗಿ ಬಂದೆ. ರಾಷ್ಟ್ರಪತಿ ರಾಮನಾಥ ಕೋವಿಂದ ಮತ್ತು ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ತಮ್ಮ ಸಾಂವಿಧಾನಿಕ ಸ್ಥಾನಮಾನ ಮರೆತು ಸಾಮಾನ್ಯ ಜನರೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿ ಮತೋತ್ಸವ ಆಚರಿಸಿದರು. ಆದರೆ, ದಿಗ್ವಿಜಯ ಸಿಂಗ್​ಗೆ ಮಾತ್ರ ತಮ್ಮ ಹಕ್ಕನ್ನು ಚಲಾಯಿಸಬೇಕು. ಮತಹಬ್ಬದಲ್ಲಿ ಭಾಗಿಯಾಗಬೇಕು ಅನಿಸಲೇ ಇಲ್ಲ ಎಂದು ಟೀಕಿಸಿದರು.

ಲೋಕಸಭೆ ಚುನಾವಣೆಯ 6ನೇ ಹಂತದಲ್ಲಿ ನಡೆದ ಮತದಾನದ ವೇಳೆ ದಿಗ್ವಿಜಯ್​ ಸಿಂಗ್​ ಭೋಪಾಲ್​ನ ದೇವಸ್ಥಾನಕ್ಕೆ ತೆರಳಿದ್ದರು. ಮತ ಚಲಾಯಿಸಲು ರಾಜಗಢಕ್ಕೆ ಹೋಗುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ನೋಡುತ್ತೇನೆ… ಸಾಧ್ಯವಾದರೆ ಹೋಗುತ್ತೇನೆ ಎಂದು ಉತ್ತರಿಸಿದ್ದರು.

ಬಳಿಕ ಅವರು ಭೋಪಾಲ್​ ನಗರದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡುತ್ತಿದ್ದ ದೃಶ್ಯ ಕಂಡುಬಂದಿತ್ತು. ಮತ್ತೊಮ್ಮೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ದಿಗ್ವಿಜಯ್ ಸಿಂಗ್, ರಾಜಗಢಕ್ಕೆ ಹೋಗಲು ತಮಗೆ ಸಾಧ್ಯವಾಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು. ರಾಜಗಢಕ್ಕೆ ಸಕಾಲದಲ್ಲಿ ತೆರಳಿ ಮತದಾನ ಮಾಡಲು ನನಗೆ ಸಾಧ್ಯವಾಗಲಿಲ್ಲ. ಮುಂದಿನ ಬಾರಿ ತಪ್ಪದೇ ಹೋಗಿ ಮತ ಹಾಕುವುದಾಗಿ ಹೇಳಿದ್ದರು.

madhyapradesh,PM modi,Digvijay singh

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ