ತಡೆಗೋಡೆಗೆ ಡಿಕ್ಕಿ ಹೊಡೆದ ಬೈಕ್-ಘಟನೆಯಲ್ಲಿ ಮೂವರು ಯುವಕರ ಸಾವು

ತುಮಕೂರು, ಮೇ 8- ಬೆಳ್ಳಂಬೆಳಗ್ಗೆ ಹೆದ್ದಾರಿಯ ತಡೆಗೋಡೆಗೆ ಬೈಕ್ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡಬೀರನಹಳ್ಳಿ ಗ್ರಾಮದ ಪೃಥ್ವಿರಾಜ್ (25) ಎಂಬುವವರ ಗುರುತು ಮಾತ್ರ ಪತ್ತೆಯಾಗಿದ್ದು, ಉಳಿದಿಬ್ಬರ ಹೆಸರು ತಿಳಿದುಬಂದಿಲ್ಲ.

ಒಂದೇ ಪಲ್ಸರ್ ಬೈಕ್‍ನಲ್ಲಿ ಬೆಳಗ್ಗೆ ಚಳ್ಳಕೆರೆಯಿಂದ ಈ ಮೂವರು ಚಿತ್ರದುರ್ಗಕ್ಕೆ ಬಂದು ನಂತರ ಬೆಂಗಳೂರು ಕಡೆಗೆ ಹೋಗುತ್ತಿದ್ದರು.

ರಾಷ್ಟ್ರೀಯ ಹೆದ್ದಾರಿ-48ರ ನೆಲಹಾಳು ಉಪ ಪೊಲೀಸ್ ಠಾಣಾ ವ್ಯಾಪ್ತಿಯ ಸಮೀಪ ಬೆಳಗ್ಗೆ 7.30ರ ಸುಮಾರಿನಲ್ಲಿ ಬರುತ್ತಿದ್ದಂತೆ ಬೈಕ್ ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿ ಹೆದ್ದಾರಿ ತಡೆಗೋಡೆಗೆ ಡಿಕ್ಕಿ ಹೊಡೆದು ಸುಮಾರು 500 ಮೀಟರ್ ದೂರ ಹಾರಿಬಿದ್ದಿದೆ.

ಡಿಕ್ಕಿಯ ರಭಸಕ್ಕೆ ಮೂವರು ಯುವಕರ ತಲೆಗೆ ಗಂಭೀರ ಪೆಟ್ಟಾಗಿ ತೀವ್ರ ರಕ್ತಸ್ರಾವಗೊಂಡು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.

ಈ ಮೂವರು ಏತಕ್ಕಾಗಿ ಬೆಂಗಳೂರಿಗೆ ಹೋಗುತ್ತಿದ್ದರು, ಯಾವ ಕೆಲಸ ಮಾಡುತ್ತಿದ್ದರು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಒಬ್ಬನ ಹೆಸರನ್ನು ಮಾತ್ರ ಪೊಲೀಸರು ಪತ್ತೆಹಚ್ಚಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಕೋರಾ ಪೊಲೀಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ಶೇಷಾದ್ರಿ, ಡಿವೈಎಸ್‍ಪಿ ತಿಪ್ಪೆಸ್ವಾಮಿ, ವೃತ್ತ ನಿರೀಕ್ಷಕ ಮಧುಸೂದನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೂವರ ಶವಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮೃತರ ವಾರಸುದಾರರ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಘಟನೆ ಸಂಬಂಧ ಕೋರಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ