ಕೇಂದ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ಮೈತ್ರಿ ಪಕ್ಷಗಳ ಅಗತ್ಯವಿದೆ : ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್

ನವದೆಹಲಿ: ಕೇಂದ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ಮೈತ್ರಿ ಪಕ್ಷಗಳ ಅಗತ್ಯವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.

543 ಸ್ಥಾನಗಳ ಪೈಕಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಸರ್ಕಾರ ರಚನೆಗೆ ಮೈತ್ರಿ ಪಕ್ಷಗಳ ಬೆಂಬಲ ಅಗತ್ಯ ಎಂದಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಹಣಕಾಸು ಸಚಿವ ಅರುಣ್ ಜೇಟ್ಲಿ ಕೂಡಾ ಇದೇ ಹೇಳಿಕೆಯನ್ನು ನೀಡಿದ್ದಾರೆ. ಒಂದು ವೇಳೆ 271 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ನಾವು ಸಂತೋಷವಾಗಿರುತ್ತೇವೆ. ಎನ್ ಡಿಎ ಸ್ಪಷ್ಟ ಬಹುಮತ ಹೊಂದಲಿದೆ ಎಂದು ರಾಮ್ ಮಾಧವ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

2014ರಲ್ಲಿ ಉತ್ತರ ಭಾರತ, ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಉತ್ತಮ ಸಾಧನೆ ಮಾಡಿದ್ದ ಬಿಜೆಪಿ ಈ ಬಾರಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ.

ಒಂದು ವೇಳೆ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಗತಿ ಪರ ನೀತಿಗೆ ಆದ್ಯತೆ ನೀಡಲಾಗುವುದು, ಆರ್ಥಿಕ ಸುಧಾರಣೆಗಳ ಮೇಲೆ ಗಮನಹರಿಸುವುದರಿಂದ ಯಾವುದೇ ಗೊಂದಲಕ್ಕೆ ಅವಕಾಶವಾಗುವುದಿಲ್ಲ ಎಂದಿದ್ದಾರೆ.

ಈಶಾನ್ಯ ಭಾರತದಲ್ಲಿ ಬಿಜೆಪಿಯ ಪ್ರಾಬಲ್ಯ ವಿಸ್ತರಣೆಯಾಗಿದೆ. ದಕ್ಷಿಣ ಭಾರತದಲ್ಲೂ ಇದೇ ರೀತಿಯ ಪ್ರಯತ್ನ ಮಾಡಲಾಗಿದೆ. ರಾಜಕಾರಣಿಯಾಗಿ ಹೇಳುವುದಾದರೆ ಆಡಳಿತ ವಿರೋಧಿ ಅಲೆಯಿಂದಾಗಿ ಕಳೆದ ಬಾರಿ ಮಾಡಿದ ಸಾಧನೆಯನ್ನು ಈ ಬಾರಿ ಮಾಡುವ ಸಾಧ್ಯತೆ ಇಲ್ಲ ಎಂದು ರಾಮ್ ಮಾಧವ್ ಹೇಳಿದ್ದಾರೆ.

Lok sabha election-2019,BJP,Ram madhav

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ