ಸರ್ಜಿಕಲ್ ಸ್ಟ್ರೈಕ್ ನ್ನು ವಿಡಿಯೋ ಗೇಮ್ ಗೆ ಹೋಲಿಸಿ, ಸೇನೆಯನ್ನು ಪ್ರಧಾನಿ ಮೋದಿ ಅಪಮಾನ ಮಾಡಿದ್ದಾರೆ: ರಾಹುಲ್ ಆರೋಪ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನ್ನು ವಿಡಿಯೊ ಗೇಮ್ ಗೆ ಹೋಲಿಸುವ ಮೂಲಕ ಸೇನೆಗೆ ಅಗೌರವ ತೋರಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸೇನೆ ಪ್ರಧಾನ ಮಂತ್ರಿಯವರ ಖಾಸಗಿ ಆಸ್ತಿಯಲ್ಲ. ದೇಶದ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯನ್ನು ತಮ್ಮ ಖಾಸಗಿ ಆಸ್ತಿಯೆಂದು ಮೋದಿಯವರು ಭಾವಿಸಿಕೊಂಡಿದ್ದಾರೆ ಎಂದು ಟೀಕಿಸಿದರು.

ಸರ್ಜಿಕಲ್ ಸ್ಟ್ರೈಕ್ ನ್ನು ಮೋದಿಯವರು ಮಾಡಿದ್ದಲ್ಲ. ಅದನ್ನು ಭಾರತೀಯ ಸೇನೆ ಮಾಡಿದ್ದು. ಹಿಂದಿನ ಯುಪಿಎ ಅವಧಿಯಲ್ಲಿ ಆದ ಸರ್ಜಿಕಲ್ ಸ್ಟ್ರೈಕ್ ನಿಜವಾದದ್ದಲ್ಲ, ಅದು ವಿಡಿಯೊ ಗೇಮ್ ಎಂದು ಮೋದಿಯವರು ಹೇಳುತ್ತಾರೆ. ಅವರು ಹೀಗೆ ಹೇಳುವ ಮೂಲಕ ಕಾಂಗ್ರೆಸ್ ನ್ನು ಅವಮಾನ ಮಾಡುತ್ತಿಲ್ಲ. ಬದಲಾಗಿ ಭಾರತೀಯ ಸೇನೆಗೆ ಅಪಮಾನ ಮಾಡಿದ್ದಾರೆ ಎಂದರು.

ಮಾಧ್ಯಮಗಳಿಗೆ ಅಗತ್ಯವಿದ್ದರೆ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಸರ್ಜಿಕಲ್ ಸ್ಟ್ರೈಕ್ ನ ದಾಖಲೆಗಳನ್ನು ತೋರಿಸುತ್ತೇವೆ. 2008ರಿಂದ 2014ರವರೆಗೆ ಯುಪಿಎ ಸರ್ಕಾರದ ಅವಧಿಯಲ್ಲಿ 6 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು, ಆ ದಿನಾಂಕಗಳನ್ನು ಕೂಡ ನೀಡಲಾಗಿದೆ ಎಂದು ಜನರಲ್ ವಿಕ್ರಮ್ ಸಿಂಗ್ ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.

ನಿನ್ನೆ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ನರೇಂದ್ರ ಮೋದಿಯವರು ಸರ್ಜಿಕಲ್ ಸ್ಟ್ರೈಕ್ ನ್ನು ಪ್ರಶ್ನಿಸಿದ್ದ ಪಕ್ಷ ಇಂದು ಮಿ ಟೂ ಮಿ ಟೂ ಎಂದು ಹೇಳುತ್ತಿದೆ. ಸರ್ಜಿಕಲ್ ಸ್ಟ್ರೈಕ್ ಎಂದರೆ ವಿಡಿಯೊ ಗೇಮ್ ಅಲ್ಲ ಎಂದು ಟೀಕಿಸಿದ್ದರು.

Rahul gandhi,surgical strikes,PM Modi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ