ಕಾರು ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳ ಸಾವು

ತುಮಕೂರು , ಏ.29- ಕೆಬಿ ಕ್ರಾಸ್ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಚಿಕ್ಕಮಗಳೂರಿನಲ್ಲಿ ಸಿಇಟಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿ ಇತರ ಮೂವರು ಮಂದಿ ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ.

ತುರುವೇಕೆರೆ ತಾಲ್ಲೂಕು ದಂಡಿನಶಿವರ ಗ್ರಾಮದ ವಿದ್ಯಾರ್ಥಿಗಳಾದ ಕಿರಣ್ (18) ಹಾಗೂ ತ್ರಿನೇಶ್ (20) ಅಪಘಾತದಲ್ಲಿ ಮೃತಪಟ್ಟವರು.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಇತರ ಮೂವರು ವಿದ್ಯಾರ್ಥಿಗಳನ್ನು ತುರುವೇಕೆರೆ ಮತ್ತು ದಂಡಿನಶಿವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕ್ಕಮಗಳೂರಿನಲ್ಲಿ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಬೇಕಿದ್ದು , ಪರೀಕ್ಷಾ ಕೇಂದ್ರಕ್ಕೆ ಇಟಿಯೋಸ್ ಕಾರಿನಲ್ಲಿ ತೆರಳುತ್ತಿದ್ದರು.

ಸಿಇಟಿ ಪರೀಕ್ಷೆ ಬೆಳಗ್ಗೆ 10.30ಕ್ಕೆ ಆರಂಭವಾಗುತ್ತಿದ್ದ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಆದಷ್ಟು ಬೇಗ ತೆರಳುವ ತರಾತುರಿಯಲ್ಲಿ ಕಾರನ್ನು ಚಾಲಕ ಅತಿ ವೇಗವಾಗಿ ಚಲಾಯಿಸುತ್ತಿದ್ದ.

ಕೆಬಿ ಕ್ರಾಸ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 78ರ ಸಮೀಪದ ಕುಂದೂರು ಪಾಳ್ಯದ ಸಮೀಪ ಕಾರು ರಸ್ತೆ ಬದಿಯೊಂದಕ್ಕೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ