ಮಂಡ್ಯ, ಹಾಸನ ಆಯ್ತು ಈಗ ಬಳ್ಳಾರಿ ಟಾರ್ಗೆಟ್- ಬೆಳ್ಳಂಬೆಳಗ್ಗೆ ಕೈ, ಕಮಲ ನಾಯಕರಿಗೆ ಐಟಿ ಶಾಕ್

ಬಳ್ಳಾರಿ: ಮಂಡ್ಯ, ಹಾಸನದಲ್ಲಿ ಐಟಿ ರೇಡ್ ನಡೆದಿದ್ದಾಯ್ತು. ಈಗ ಬಳ್ಳಾರಿಯನ್ನು ಟಾರ್ಗೆಟ್ ಮಾಡಿರುವ ಐಟಿ ಅಧಿಕಾರಿಗಳು, ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ದಿನವೇ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಗೆ ಶಾಕ್ ನೀಡಿದ್ದಾರೆ.

ಬೆಳ್ಳಂಬೆಳಗ್ಗೆ ಬಳ್ಳಾರಿಯಲ್ಲಿ 3 ಕಡೆ ಐಟಿ ಅಧಿಕಾರಿಗಳು, ಚುನಾವಣಾಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬಳ್ಳಾರಿಯ ಮೂವರು ಕಾಂಗ್ರೆಸ್ ನಾಯಕರು, ಬಿಜೆಪಿ ಶಾಸಕ ಸೋಮಶೇಖರರೆಡ್ಡಿ ಆಪ್ತರು ಹಾಗೂ ಬಿಜೆಪಿ ಶಾಸಕ ಶ್ರೀರಾಮುಲು ಆಪ್ತ ರಾಜು ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಹಾಗೆಯೇ ಕೆಪಿಸಿಸಿ ಉಪಾಧ್ಯಕ್ಷ ಸೂರ್ಯನಾರಾಯಣ ರೆಡ್ಡಿ ಮನೆ, ಕಚೇರಿ ಹಾಗೂ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಮಾವ ಯರ್ರಿಸ್ವಾಮಿ ಮನೆ ಮೇಲೂ ಐಟಿ ದಾಳಿ ನಡೆದಿದೆ.

ಚುನಾವಣಾ ಹೊತ್ತಲ್ಲೇ ಗಾಂಧಿನಗರದಲ್ಲಿರುವ ಸೂರ್ಯನಾರಾಯಣ ರೆಡ್ಡಿ ಅವರ ಶ್ರೀ ರಾಘವೇಂದ್ರ ಎಂಟರ್‍ಪ್ರೈಸಸ್ ಕಚೇರಿ ಮೇಲೆ ಐಟಿ ದಾಳಿ ನಡೆಸಲಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ದಿನವೇ ಕೈ, ಕಮಲ ನಾಯಕರು ಹಾಗೂ ಅವರ ಆಪ್ತರ ಮನೆಗಳ ಮೇಲೆ ನಡೆದಿರುವ ಐಟಿ ದಾಳಿಯಿಂದ ಚುನಾವಣಾ ಕಾವು ಮತ್ತಷ್ಟು ಹೆಚ್ಚಾಗಿದೆ.

ಸದ್ಯ ಐಟಿ ಅಧಿಕಾರಿಗಳು ಕಾಂಗ್ರೆಸ್, ಬಿಜೆಪಿ ನಾಯಕರು ಹಾಗೂ ಅವರ ಆಪ್ತರ ಮನೆಗಳಲ್ಲಿ ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ