ಚುನಾವಣಾ ಬಾಂಡ್ ಮೂಲಕ ಸಂಗ್ರಹವಾದ ಹಣದ ಬಗ್ಗೆ ಬಹಿರಂಗಗೊಳಿಸಿ: ರಾಜಕೀಯ ಪಕ್ಷಗಳಿಗೆ ಸುಪ್ರೀಂ ಆದೇಶ

ನವದೆಹಲಿ: ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್​ (ಎಲೆಕ್ಟೋರಲ್​ ಬಾಂಡ್​) ಮೂಲಕ ಸಂಗ್ರಹಿಸಿದ ಹಣದ ಬಗ್ಗೆ ಮೇ 15ರ ಒಳಗೆ ಬಹಿರಂಗಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.

ರಾಜಕೀಯ ಪಕ್ಷಗಳು ಚುನಾವಣೆ ವೇಳೆ ಕರಾರುಪತ್ರಗಳ (ಬಾಂಡ್) ಮೂಲಕ ಸಿಕ್ಕಂತಹ ದಾನಗಳ ಬಗ್ಗೆ ಮಾಹಿತಿಯನ್ನು ನೀಡಬೇಕು. ಯಾರು ದಾನ ನೀಡಿದ್ದಾರೆ ಹಾಗೂ ಎಷ್ಟು ಹಣವನ್ನು ದಾನವಾಗಿ ಪಡಯಲಾಗಿದೆ ಎನ್ನುವ ಸಂಪೂರ್ಣ ದಾಖಲೆಗಳನ್ನು ಮೇ 15ರ ಒಳಗಾಗಿ ಮುಚ್ಚಿದ ಲಕೋಟಿಯಲ್ಲಿ ಚುನಾವಣಾ ಆಯೋಗಕ್ಕೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಆದೇಶ ನೀಡಿದ್ದಾರೆ.

ಚುನಾವಣಾ ಬಾಂಡ್ ಯೋಜನೆಯನ್ನು ಪ್ರಶ್ನಿಸಿ ಎನ್‍ಜಿಒ ಒಂದು ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ಗುರುವಾರ ವಿಚಾರಣೆ ನಡೆದಿದ್ದ ಸುಪ್ರೀಂ ಕೋರ್ಟ್, ಚುನಾವಣಾ ಬಾಂಡ್ ಖರೀದಿಸುವವರ ಗುರುತು ಬಹಿರಂಗ ಆಗುವುದಿಲ್ಲ ಎಂದಾದರೆ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿಕೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದ ಈ ವ್ಯವಸ್ಥೆಯೇ ವ್ಯರ್ಥ. ಚುನಾವಣೆಯಲ್ಲಿ ಕಪ್ಪು ಹಣ ಬಳಕೆಯನ್ನು ತಡೆಯುವುದಕ್ಕಾಗಿ ಜಾರಿಗೆ ತಂದಿರುವ ವ್ಯವಸ್ಥೆ ಉದ್ದೇಶವೇ ಈಡೇರದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು.

ರಾಜಕೀಯ ಪಕ್ಷಗಳಿಗೆ ಹರಿದು ಬರುವ ಚುನಾವಣಾ ದೇಣಿಗೆಯನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿತ್ತು. 2017ರ ಬಜೆಟ್ ಭಾಷಣದಲ್ಲಿ ಚುನಾವಣಾ ಬಾಂಡ್ ಪರಿಚಯಿಸಿತ್ತು. ಎಲೆಕ್ಟೋರಲ್ ಬಾಂಡ್‍ಗೆ ಕೇಂದ್ರ ಸರ್ಕಾರವು ಅಂತಿಮ ರೂಪ ನೀಡಿದ್ದು, ಅಧಿಸೂಚನೆ ಹೊರಡಿಸಿತ್ತು.

ಯಾವುದೇ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಇಚ್ಛಿಸುವವರು ಆಯ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಬ್ರ್ಯಾಂಚ್ ಮೂಲಕ ನಿರ್ದಿಷ್ಟ ಮೊತ್ತದ ಎಲೆಕ್ಟೋರನ್ ಬಾಂಡ್ ಖರೀದಿಸಬೇಕು. ಬಳಿಕ ಅದನ್ನು ರಾಜಕೀಯ ಪಕ್ಷಗಳಿಗೆ ನೀಡಬಹುದು. ಈ ಮೂಲಕ ದಾನಿಗಳು ನೀಡಿದ ಬಾಂಡ್ ಪಡೆದ ರಾಜಕೀಯ ಪಕ್ಷವು ಬ್ಯಾಂಕ್ ಖಾತೆಗೆ ಬಾಂಡ್ ಸಲ್ಲಿಸಿ, ಹಣವನ್ನು ಖಾತೆಗೆ ವರ್ಗಾವಣೆ ಮಾಡಿಕೊಳ್ಳಬಹುದು.

Supreme Court asks all political parties who have received donations through Electoral Bonds to submit in sealed cover to the Election Commission details of donations received.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ