ಕೇಂದ್ರ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ-ಸಂಸದ ಆರ್.ಧ್ರುವನಾರಾಯಣ್

ಕೊಳ್ಳೇಗಾಲ, ಏ.12-ಕೇಂದ್ರ ಸರ್ಕಾರ ತಾನು ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಸಂಸದ ಆರ್.ಧೃವನಾರಾಯಣ್ ಆರೋಪಿಸಿದರು.

ಪಟ್ಟಣದಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದ ಅವರು, ನನಗೆ ಎರಡು ಬಾರಿ ಸಂಸದನಾಗಲು ಅವಕಾಶ ಮಾಡಿಕೊಟ್ಟಿದ್ದೀರಿ, ಇದಕ್ಕೆ ಋಣಿಯಾಗಿದ್ದೇನೆ. ಈ ಬಾರಿಯೂ ಗೆಲುವು ಸಾಧಿಸಲು ತಮ್ಮನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

ನನ್ನ ಅವಧಿಯಲ್ಲಿ ನಾನು ಕಾಲಹರಣ ಮಾಡದೆ ಸಂಸದರ ನಿಧಿಯನ್ನು ಬಳಸಿಕೊಂಡು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಸಂಸದರ ಅನುದಾನ ಬಳಕೆ ಹಾಗೂ ಸಂಸತ್‍ನಲ್ಲಿ ಪಾಲ್ಗೊಳ್ಳುವುದರಲ್ಲಿ ನನಗೆ ದೇಶದಲ್ಲೇ ನಾಲ್ಕನೇ ಸ್ಥಾನ ಸಿಕ್ಕಿರುವುದು ನನ್ನ ಕಾರ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

209 ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮಾಡಿರುವುದೂ ಸೇರಿದಂತೆ ತಾವು ಮಾಡಿರುವ ಕಾರ್ಯಗಳನ್ನು ಧೃವನಾರಾಯಣ್ ಮತದಾರರಿಗೆ ತಿಳಿಸಿದರು.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದ ಬಿಎಸ್‍ಪಿಗೆ ಹೋಗಿದ್ದ ನಗರಸಭಾ ಮಾಜಿ ಸದಸ್ಯ ಚಂದ್ರಶೇಖರ್ ಇಂದು ಕಾಂಗ್ರೆಸ್‍ಗೆ ಧೃವನಾರಾಯಣ್ ಸಮ್ಮುಖದಲ್ಲಿ ಮರಳಿ ಸೇರ್ಪಡೆಯಾದರು.

ಮಾಜಿ ಶಾಸಕ ಎಸ್.ಜಯಣ್ಣ, ಎ.ಆರ್.ಕೃಷ್ಣಮೂರ್ತಿ, ಎಸ್.ಬಾಲರಾಜು, ಸ್ಥಳೀಯ ನಗರಸಭಾ ಸದಸ್ಯರು, ಕಾರ್ಯಕರ್ತರು, ಮುಖಂಡರು ಧೃವನಾರಾಯಣ್ ಅವರಿಗೆ ಸಾಥ್ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ