ಅಭಿವೃದ್ಧಿಗಾಗಿ ಈಶ್ವರ ಖಂಡ್ರೆಗೆ ಗೆಲ್ಲಿಸಿ –ರಹೀಂಖಾನ್

ಬೀದರ: ಬೀದರ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರನ್ನು ಗೆಲ್ಲಿಸಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂಖಾನ್ ಹೇಳಿದರು.

ಬೀದರ ತಾಲ್ಲೂಕಿನ ಕನ್ನಳ್ಳಿ, ದದ್ದಾಪೂರ, ಅಗ್ರಹಾರ, ಸೋಲಪೂರ, ಹಮಿಲಾಪೂರ, ಫತೇಪೂರ ಹಾಗೂ ಶ್ರೀಮಂಡಲ ಗ್ರಾಮಗಳಲ್ಲಿ ಕಾಂಗ್ರೆಸ್ ಪ್ರಚಾರ ಸಭೆ ನಡೆಸಿ ಅವರು ಮಾತನಾಡಿದರು.

ಸದಾ ಜನರ ನೋವು, ನಲಿವಿಗೆ ಸ್ಪಂದಿಸುವ ಈಶ್ವರ ಖಂಡ್ರೆ ನಿಜವಾದ ಜನನಾಯಕರಾಗಿದ್ದಾರೆ. ಜನರ ಆಶೀರ್ವಾದದಿಂದಾಗಿಯೇ ರಾಜಕೀಯದಲ್ಲಿ ಎತ್ತರೆತ್ತರಕ್ಕೆ ಬೆಳೆಯುತ್ತಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ತಿಳಿಸಿದರು.

ಶಾಸಕ, ಸಚಿವರಾಗಿ ಜಿಲ್ಲೆಯಲ್ಲಿ ನಾನಾ ಪ್ರಗತಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸಲು ಇದೀಗ ಲೋಕಸಭಾ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಜಿಲ್ಲೆ ಹಾಗೂ ಜನರ ಒಳಿತಿಗಾಗಿ ಸುಶಿಕ್ಷಿತ, ಜನಪರ ಕಾಳಜಿಯುಳ್ಳ ಈಶ್ವರ ಖಂಡ್ರೆ ಅವರನ್ನು ಆಯ್ಕೆ ಮಾಡಬೇಕು ಎಂದು ಕೋರಿದರು.

ಭವಿಷ್ಯದ ಪ್ರಧಾನಿಯಾಗಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಡವರ ಬಗ್ಗೆ ಅತೀವ ಕಾಳಜಿ ಹೊಂದಿದ್ದಾರೆ. ಹೀಗಾಗಿಯೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಡವರಿಗೆ ವಾರ್ಷಿಕ ರೂ. 72 ಸಾವಿರ ನೆರವು ಒದಗಿಸುವ ಯೋಜನೆಯನ್ನು ಜಾರಿಗೊಳಿಸುವ ಭರವಸೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷ ದೇಶದ ಸಮಗ್ರತೆ, ಅಖಂಡತೆ ಹಾಗೂ ಅಭಿವೃದ್ಧಿಗಾಗಿ ಮತ ಯಾಚಿಸುತ್ತಿದೆ ಎಂದು ಹೇಳಿದರು.

ಕೆಪಿಸಿಸಿ ಕಾರ್ಯದರ್ಶಿಗಳಾದ ಅಮೃತರಾವ್ ಚಿಮಕೋಡೆ, ಇರ್ಷಾದ್ ಅಲಿ ಪೈಲ್ವಾನ್, ಮುಖಂಡರಾದ ಶಂಕರ ದೊಡ್ಡಿ, ಕಾಮಶೆಟ್ಟಿ ಘೋಡಂಪಳ್ಳಿ, ರಾಮರಾವ್ ಪಾಟೀಲ, ಬಸಪ್ಪ ಸೋಲಪೂರ, ಮಾಣಿಕ, ಸಮಿ ಪಟೇಲ್ ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ