ಆನೇಕ ಶಾಸಕರಿಗೆ ಕುಮಾರಸ್ವಾಮಿ ಸಿ.ಎಂ. ಆಗಿ ಮುಂದುವರೆಯುವುದು ಇಷ್ಟವಿಲ್ಲ-ಮಾಜಿ ಸಿ.ಎಂ.ಯಡಿಯೂರಪ್ಪ

ಶಿವಮೊಗ್ಗ,ಏ.7-ಲೋಕಸಭೆ ಚುನಾವಣೆ ನಂತರ ಸಮ್ಮಿಸ್ರ ಸರ್ಕಾರ ಪತನವಾಗಲಿದ್ದು, ತಮಿಳುಗರಿಗೆ ನಿಗಮ ಮಂಡಳಿಯಲ್ಲಿ ಎರಡು ಅಧ್ಯಕ್ಷ ಸ್ಥಾನ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಭದ್ರಾವತಿಯಲ್ಲಿ ತಮ್ಮ ಪುತ್ರ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಪ್ರಚಾರ ನಡೆಸಿದ ಅವರು, ಯಾವುದೇ ಕಾರಣಕ್ಕೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಲೋಕಸಭಾ ಚುನಾವಣೆ ನಂತರ ಮುಂದುವರೆಯುವುದಿಲ್ಲ. ಅನೇಕ ಶಾಸಕರಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುವುದೇ ಇಷ್ಟವಿಲ್ಲ ಎಂದರು.

ಈವರೆಗೂ ಆಡಳಿತ ನಡೆಸಿದ ಎಲ್ಲ ಪಕ್ಷಗಳು ತಮಿಳುಗರನ್ನು ಕೇವಲ ವೋಟ್‍ಬ್ಯಾಂಕ್ ಮಾಡಿಕೊಂಡಿದ್ದವು.ಬಿಜೆಪಿ ಅಧಿಕಾರಕ್ಕೆ ಬಂದರೆ ನಿಮ್ಮ ಸಮುದಾಯಕ್ಕೆ ನಿಗಮ ಮಂಡಳಿಯಲ್ಲಿ ಎರಡು ಅಧ್ಯಕ್ಷ ಸ್ಥಾನ ನೀಡುತ್ತೇವೆ ಎಂದು ವಾಗ್ದಾನ ಮಾಡಿದರು.

ಕಾಂಗ್ರೆಸ್-ಜೆಡಿಎಸ್ ಒಡೆದ ಮನೆಯಾಗಿದೆ.ಒಬ್ಬರನ್ನೊಬ್ಬರು ಮುಖ ನೋಡುವ ಸ್ಥಿತಿಯಲ್ಲಿಲ್ಲ. ಹಾಸನ, ಮಂಡ್ಯ, ತುಮಕೂರಿನಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸಲು ಸಿದ್ದರಾಮಯ್ಯ ಖೆಡ್ಡಾ ತೋಡಿದ್ದಾರೆ.ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಜೆಡಿಎಸ್‍ನವರು ಪಣ ತೊಟ್ಟಿದ್ದಾರೆ.ಹೀಗೆ ಒಬ್ಬರಿಗೊಬ್ಬರು ಪರಸ್ಪರ ಕಾಲೆಳೆಯುವುದರಲ್ಲೇ ನಿರಂತರಾಗಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಎರಡಂಕಿಯನ್ನು ದಾಟುವುದಿಲ್ಲ.ಸಾಲಮನ್ನಾ ಎಂಬುದು ಕೇವಲ ಭರವಸೆಯಾಗೇ ಉಳಿದಿದೆ.ಜನರು ಕುಮಾರಸ್ವಾಮಿ ಮಾತನ್ನು ನಂಬುತ್ತಿಲ್ಲ. ಸುಮಾರು 20ಕ್ಕೂ ಹೆಚ್ಚು ಶಾಸಕರಿಗೆ ಕುಮಾರಸ್ವಾಮಿ ಮೇಲೆ ನಂಬಿಕೆಯೇ ಇಲ್ಲ. ಇಂಥ ಸರ್ಕಾರ ಯಾವ ಪುರುಷಾರ್ಥಕ್ಕೆ ಇರಬೇಕೆಂದು ಪ್ರಶ್ನೆ ಮಾಡಿದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇವಲ ನರೇಂದ್ರ ಮೋದಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದರಲ್ಲೇ ನಿರತರಾಗಿದ್ದಾರೆ.ಅವರ ಮಾತನ್ನು ಅವರ ಪಕ್ಷದವರೇ ಕೇಳುತ್ತಿಲ್ಲ. ರಾಹುಲ್ ಎಲ್ಲೆಲ್ಲಿ ಪ್ರಚಾರ ಮಾಡುತ್ತಾರೋ ಅಲ್ಲಿ ಕಾಂಗ್ರೆಸ್‍ಗೆ ಸೋಲು ಕಟ್ಟಿಟ್ಟ ಬುತ್ತಿ.ಕರ್ನಾಟಕದಲ್ಲೂ ಅವರು ಹೆಚ್ಚು ಪ್ರಚಾರ ಮಾಡಿದರೆ ಬಿಜೆಪಿಗೇ ಅನುಕೂಲ ಎಂದು ವ್ಯಂಗ್ಯವಾಡಿದರು.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಜನಸಾಮಾನ್ಯರಿಗೆ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಶಿವಮೊಗ್ಗದಲ್ಲಿ ರಾಘವೇಂದ್ರ ಗೆಲುವುನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ