ಪ್ರಧಾನಿ ಮೋದಿಯಿಂದ ತನಿಖಾ ಸಂಸ್ಥೆಗಳ ದುರ್ಬಳಕೆ: ಸಿಎಂ ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು: ಪ್ರಧಾನಿ ಮೋದಿಯವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು, ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಐಟಿ ಕಚೇರಿ ಎದುರು ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಪ್ರಧಾನಿ ಮೋದಿ ಸಂವಿಧಾನ ದುರುಪಯೋಗ ಮಾಡಿಕೊಂಡಿದ್ದಾರೆ. ವಿರೋಧಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಐಟಿ ಇಲಾಖೆ ಸೇರಿದಂತೆ ತನಿಖಾ ಸಂಸ್ಥೆಗಳನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ. ಈ ರೀತಿಯ ಮನಸ್ಥಿತಿ ಹೊಂದಿರುವ ಬಿಜೆಪಿಯ ಪತನ ರಾಜ್ಯದಿಂದಲೇ ಆಗಲಿದೆ ಎಂದರು.

ಆದಾಯ ತೆರಿಗೆ ಇಲಾಖೆ ನಿರ್ದೇಶಕ ಪ್ರಾಮಾಣಿಕನಾ? ನನ್ನ ಬಳಿ ಎಲ್ಲ ದಾಖಲೆ ಇವೆ. ವ್ಯಾಟ್ ಎಷ್ಟು ಕಲೆ ಹಾಕಿದ್ದಿರಿ. ಅಧಿಕಾರಿಗಳು ಏಜೆಂಟ್ ಆಗಿ ಕೆಲಸ‌ ಮಾಡಬಾರದು. ಐಟಿ ಇಲಾಖೆ ಪೊಲೀಸರ ನೆರವು ಪಡೆಯಬೇಕು. ಆದರೆ, ಸಿಆರ್‌ಪಿಎಫ್‌ ನೆರವಿನ ಉದ್ದೇಶ ಏನು. ಒಕ್ಕೂಟ ವ್ಯವಸ್ಥೆ ಛಿದ್ರ ಮಾಡುತ್ತಿದ್ದಿರಿ ಎಂದು ವಾಗ್ದಾಳಿ ನಡೆಸಿದರು.

ಇಲ್ಲಿನ ಓರ್ವ ಬಿಜೆಪಿ ಮುಖಂಡರು ಒಂದು ಲಿಸ್ಟ್​ ಅನ್ನು ಅಮಿತ್​ ಷಾಗೆ ಕಳುಹಿಸುತ್ತಾರೆ. ಅಮಿತ್​ ಷಾ ಅಧಿಕಾರಿಗಳನ್ನು ಕಳುಹಿಸಿ ಆ ಲಿಸ್ಟ್​ನಲ್ಲಿರುವವರ ಮೇಲೆ ದಾಳಿ ಮಾಡಿಸುತ್ತಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಸೂಚನೆಯಂತೆ ಐಟಿ ದಾಳಿ ನಡೆಯುತ್ತಿದೆ ಎಂದು ಕಿಡಿಕಾರಿದರು.

ಈ ರೀತಿಯ ದಾಳಿಗಳಿಗೆ ನಾವು ಹೆದರುವುದಿಲ್ಲ. ನನ್ನ ಮನೆ ಬಾಗಿಲು ಯಾವಾಗಲೂ ತೆರೆದಿರುತ್ತದೆ. ಐಟಿ ಅಧಿಕಾರಿಗಳು ಯಾವಾಗ ಬೇಕಾದರೂ ಬರಬಹುದು ಎಂದು ಕುಮಾರಸ್ವಾಮಿ ಇದೇ ವೇಳೆ ಸವಾಲು ಹಾಕಿದ್ದಾರೆ.

ಪ್ರತಿಭಟನೆಯಲ್ಲಿ ಡಿಸಿಎಂ ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ,ಸಚಿವರಾದ ಸಚಿವ ಡಿಕೆಶಿವಕುಮಾರ್, ಸಾ.ರಾ ಮಹೇಶ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕ ಮುನಿರತ್ನ ಸೇರಿದಂತೆ ಕಾಂಗ್ರೆಸ್-ಜೆಡಿಎಸ್ ಮುಖಂಡರು ಭಾಗಿಯಾಗಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ