ಸಂಸದ ಮುನಿಯಪ್ಪ ಸೋಲಿಸಲು ಬಿಜೆಪಿ ಕಾರ್ಯತಂತ್ರ

ಕೋಲಾರ, ಮಾ.27- ಸೋಲಿಲ್ಲದ ಸರದಾರ ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ಈ ಬಾರಿ ಸೋಲುಣಿಸಲು ಬಿಜೆಪಿ ಕಾರ್ಯತಂತ್ರ ರೂಪಿಸಿದ್ದು , ಬಿಬಿಎಂಪಿ ಸದಸ್ಯ ಮುನಿಸ್ವಾಮಿ ಅವರನ್ನು ಅಸ್ತ್ರವನ್ನಾಗಿ ಬಳಸಿದೆ.

ಸ್ವಪಕ್ಷೀಯರ ವಿರೋಧದ ನಡುವೆಯೂ ಕಳೆದ 7 ಬಾರಿ ಭರ್ಜರಿ ಜಯಭೇರಿ ಭಾರಿಸಿರುವ ಕೆ.ಎಚ್.ಮುನಿಯಪ್ಪ 8ನೆ ಗೆಲುವಿನತ್ತ ದಾಪುಗಾಲಿಟ್ಟಿದ್ದು , ಕೆಎಚ್‍ಎಂ ಅವರನ್ನು ಗೆಲುವಿನ ನಾಗಾಲೋಟಕ್ಕೆ ಬಿಜೆಪಿ ಬ್ರೇಕ್ ಹಾಕುವುದೇ ಎನ್ನುವುದು ಕುತೂಹಲ ಕೆರಳಿಸಿದೆ.

ಸ್ಪೀಕರ್ ರಮೇಶ್‍ಕುಮಾರ್ ಹಾಗೂ ಕೆಲ ಕಾಂಗ್ರೆಸ್ ಶಾಸಕರೇ ಮುನಿಯಪ್ಪ ಅವರಿಗೆ ಟಿಕೆಟ್ ನೀಡಬಾರದು ಎಂದು ದೆಹಲಿಯಲ್ಲಿ ಲಾಬಿ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಹೈಕಮಾಂಡ್ ಈ ಬಾರಿಯೂ ಕೆಎಚ್‍ಎಂ ಅವರಿಗೆ ಮಣೆ ಹಾಕಿರುವುದರಿಂದ ಭಿನ್ನಮತೀಯರು ಯಾರಿಗೆ ಬೆಂಬಲ ಸೂಚಿಸುತ್ತಾರೆ ಎಂಬುದರ ಮೇಲೆ ಕೋಲಾರದ ಭವಿಷ್ಯ ನಿಂತಿದೆ. ಹೀಗಾಗಿ ಜಿಲ್ಲೆಯಲ್ಲಿ ಬಿಸಿಲ ಬೇಗೆಗಿಂತ ಚುನಾವಣಾ ಕಾವು ಜೋರಾಗಿದೆ.

ಬಂಡಾಯದ ಭೀತಿ: ಕೆಎಚ್‍ಎಂ ವಿರೋಧಿ ಪಾಳಯದ ಬೆಂಬಲ ದೊಂದಿಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಿಬಿಎಂಪಿ ಸದಸ್ಯ ಮುನಿಸ್ವಾಮಿ ಅವರಿಗೆ ಬಂಡಾಯದ ಭೀತಿ ಎದುರಾಗಿದೆ.

ಕೋಲಾರದಿಂದ ತಮಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದ ಬಿಜೆಪಿ ಬಂಡಾಯ ಅಭ್ಯರ್ಥಿ ಡಿ.ಎಸ್.ವೀರಯ್ಯ ಮತ್ತು ರಮೇಶ್ ಬಾಬು ನಾಮಪತ್ರ ಸಲ್ಲಿಸಿರುವುದು ಕೇಸರಿ ಪಡೆಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

ಮುನಿಯಪ್ಪ ಮತ್ತು ವಿರೋಧಿ ಪಾಳಯದ ಯುದ್ಧವೆಂದೇ ಬಿಂಬಿತವಾಗಿರುವ ಕೋಲಾರ ಅಖಾಡದಲ್ಲಿ ಒಟ್ಟು 23 ಅಭ್ಯರ್ಥಿಗಳಿದ್ದು , 32 ನಾಮಪತ್ರ ಸಲ್ಲಿಕೆಯಾಗಿದೆ.

ಭದ್ರಕೋಟೆ: ಇದುವರೆಗೂ ಕಾಂಗ್ರೆಸ್ ಭದ್ರಕೋಟೆಯಾಗಿರುವ ಕೋಲಾರದಲ್ಲಿ ನಡೆದ 16 ಚುನಾವಣೆಗಳಲ್ಲಿ 15ರಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ್ದರೆ 1984ರಲ್ಲಿ ಜನತಾ ಪಕ್ಷ ಡಾ.ವಿ.ವೆಂಕಟೇಶ್ ಮಾತ್ರ ಜಯ ಗಳಿಸಿದ್ದರು.

ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಪ್ರಥಮವಾಗಿ 1952ರಲ್ಲಿ ದ್ವಿಸದಸ್ಯ ಕ್ಷೇತ್ರವಾಗಿ ರೂಪುಗೊಂಡು ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ದೊಡ್ಡ ತಿಮ್ಮಯ್ಯ ಮತ್ತು ಎಂ.ಎನ್.ಕೃಷ್ಣಪ್ಪ ಆಯ್ಕೆಯಾಗಿದ್ದರು.

1957ರಲ್ಲಿ 2ನೇ ಬಾರಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ನ ದೊಡ್ಡತಿಮ್ಮಯ್ಯ, ಕೆ.ಎಸ್.ರೆಡ್ಡಿ ಆಯ್ಕೆಯಾಗಿದ್ದರು.

1962ರಲ್ಲಿ 3ನೇ ಬಾರಿಗೆ ಏಕ ಸದಸ್ಯ ಕ್ಷೇತ್ರವಾಗಿ ರೂಪುಗೊಂಡು ದೊಡ್ಡ ತಿಮ್ಮಯ್ಯನವರು ಚುನಾಯಿತರಾಗಿದ್ದರು.ಆನಂತರ 1967-1971, 1977, 1980 ಈ ನಾಲ್ಕು ಚುನಾವಣೆಗಳಲ್ಲಿ ಕಾಂಗ್ರೆಸ್‍ನ ಜಿ.ವೈ.ಕೃಷ್ಣನ್ ಆರಿಸಿ ಬಂದಿದ್ದರು.

1984ರಲ್ಲಿ ಜನತಾ ಪಕ್ಷದ ಡಾ.ವೆಂಕಟೇಶ್ ಒಮ್ಮೆ ಮಾತ್ರ ಸಂಸದರಾಗಿದ್ದರು. 1989ರಲ್ಲಿ ಮತ್ತೆ ಕಾಂಗ್ರೆಸ್ ಪಾಲಾಗಿ ವೈ.ರಾಮಕೃಷ್ಣ ಆಯ್ಕೆಯಾಗಿದ್ದರು.

ಅವರ ನಂತರ 1991ರಿಂದ 2014ರವರೆಗೆ ನಡೆದ 7 ಚುನಾವಣೆಗಳಲ್ಲಿ ಕೆ.ಎಚ್.ಮುನಿಯಪ್ಪನವರು ಆಯ್ಕೆ ಯಾಗಿದ್ದು. 8ನೇ ಬಾರಿಗೂ ಅವರು ಈ ಚುನಾವಣೆ ಕೂಡಾ ಸಾಕಷ್ಟು ಕುತೂಹಲ ಕೆರಳಿಸಿದ್ದು ಮುನಿಯಪ್ಪ ಅವರನ್ನು ಮತದಾರ ಕೈ ಹಿಡಿಯುವನೆ ಎಂಬುದನ್ನು ಕಾದು ನೋಡಬೇಕಿದೆ.

ಬಲಾಬಲ: ಕೋಲಾರ ಲೋಕಸಭಾ ಕ್ಷೇತ್ರ ಶಿಢ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಮುಳಬಾಗಿಲು (ಮೀಸಲು), ಕೆಜಿಎಫ್ (ಮೀಸಲು), ಬಂಗಾರಪೇಟೆ (ಮೀಸಲು), ಕೋಲಾರ ಮತ್ತು ಮಾಲೂರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಕಾಂಗ್ರೆಸ್‍ನ 5 ಶಾಸಕರು, ಜೆಡಿಎಸ್‍ನ ಇಬ್ಬರು ಮತ್ತು ಪಕ್ಷೇತರ ಒಬ್ಬ ಸದಸ್ಯ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ