ಕಡೂರು ಮತ್ತು ಬೀರೂರು ದೇವೇಗೌಡರಿಗೆ ಶಕ್ತಿ ನೀಡಿದ ಕ್ಷೇತ್ರಗಳು-ಸಚಿವ ಎಚ್.ಡಿ.ರೇವಣ್ಣ

ಕಡೂರು, ಮಾ.25- ಕಡೂರು ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸುವ ಗುರಿ ಹೊಂದಿದ್ದೇವೆ. ಕಡೂರು ಮತ್ತು ಬೀರೂರು ತಮ್ಮ ತಂದೆಯವರಿಗೆ ಶಕ್ತಿ ನೀಡಿದ ಕ್ಷೇತ್ರಗಳು ಇದರ ಋಣ ತೀರಿಸಲು ಅವಕಾಶ ಕಲ್ಪಿಸುವಂತೆ ಸಚಿವ ಎಚ್.ಡಿ.ರೇವಣ್ಣ ಮನವಿ ಮಾಡಿದರು.

ಪಟ್ಟಣದ ಕೆಎಲ್‍ವಿ ವೃತ್ತದ ಬಳಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಚುನಾವಣಾ ಪ್ರಚಾರ ಕಾರ್ಯಾಲಯದ ಉದ್ಘಾಟತನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿ ಆದ ನಂತರ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ದಿಗೆ 76 ಕೋಟಿ ರೂ, ಹೆಬ್ಬೆ ಯೋಜನೆಗೆ ಬಜೆಟ್‍ನಲ್ಲಿ 100 ಕೋಟಿ ರೂ ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಕಡೂರು ಕ್ಷೇತ್ರದಲ್ಲಿ ಸುಮಾರು 850 ಎಕರೆ ಅಮೃತ್ ಮಹಲ್‍ಗೆ ಸೇರಿದ ಜಮೀನನ್ನು ಈ ಪ್ರದೇಶದಲ್ಲಿ ಶಾಶ್ವತವಾದ ಪಶುವೈದ್ಯಕೀಯ ಕಾಲೇಜು ಮಾಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು. ಈ ಭಾಗಕ್ಕೆ ತೀವ್ರ ಬರಗಾಲ ಇರುವುದರಿಂದ ಮುಖ್ಯಮಂತ್ರಿಗಳಿಂದ ಹೆಚ್ಚಿನ ಅನುದಾನ ನೀಡುವ ಮೂಲಕ ಶಾಶ್ವತ ನೀರಾವರಿ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ ಎಂದರು.

ಕಡೂರು ಮತ್ತು ಬೀರೂರು ಪುರಸಭೆಗಳಿಗೆ ರಸ್ತೆ ನಿರ್ಮಾಣಕ್ಕೆ 10 ಕೋಟಿ ರೂ . ನೀಡಲಾಗಿದೆ.ಕೆರೆಗಳ ಅಭಿವೃದ್ದಿಗಾಗಿ 25 ಕೋಟಿರೂ ಅನುದಾನ ನೀಡಲಾಗಿದೆ.ಈ ಭಾಗದ ಕಾಂಗ್ರೆಸ್ ಮುಖಂಡರುಗಳ ಸಲಹೆ ಸಹಕಾರ ಪಡೆದು ಮುಂದಿನ ದಿನಗಳಲ್ಲಿ ಯಾವ ಯಾವ ಕಾಮಗಾರಿಗಳು ಆಗಬೇಕಿದೆ ಎಂಬುದನ್ನು ಚರ್ಚಿಸಿ ಅವುಗಳನ್ನು ಅನುಷ್ಟಾನಗೊಳಿಸಲು ಪ್ರಯತ್ನಿಸಲಾಗುವುದು ಎಂದರು.

ಹಾಸನ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ದೇವೇಗೌಡರ ಮಾರ್ಗದರ್ಶನ ಪಡೆದು ಈ ಭಾಗದಲ್ಲಿ ಅತಿಹೆಚ್ಚು ತೆಂಗು ಮತ್ತು ಅಡಿಕೆ ಬೆಳೆಗಳನ್ನು ಬೆಳೆಯುತ್ತಿದ್ದು. ಇವುಗಳ ಉಳಿವಿಗಾಗಿ ಅತಿಶೀಘ್ರದಲ್ಲಿ ಶಾಶ್ವತ ನೀರಾವರಿಗೆ ಪ್ರಯತ್ನಿಸಲಾಗುವುದು. ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಕನಸಿದ್ದು. ಅವುಗಳನ್ನು ನನಸಾಗಿಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.

ವೈ.ಎಸ್.ವಿ.ದತ್ತ ಅವರ ಕನಸಾದ ಗೋಂಧಿ ಹಳ್ಳದ ಯೋಜನೆಗೆ 584 ಕೋಟಿ ರೂ. ಅನುದಾನ ಅಗತ್ಯವಿದೆ. ಯೋಜನೆ ತರುವುದರ ಮೂಲಕ ರೈತರ ಪರವಾಗಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ಮಾತನಾಡಿ, ನಾವೆಲ್ಲರೂ ತಾವೇ ಅಭ್ಯರ್ಥಿಗಳೆಂದು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ಪ್ರಜ್ವಲ್ ರೇವಣ್ಣ ಅವರನ್ನು ಈ ಭಾಗದಿಂದ ಸುಮಾರು 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಲಾಗುವುದು ಎಂದರು.

ಉಪಸಭಾಪತಿ ಎಸ್.ಎಲ್. ಧರ್ಮೇಗೌಡ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಮಾಜಿ ಶಾಸಕ ವೈ.ಎಸ್.ವಿ. ದತ್ತ, ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್, ಜಿ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜ್, ಜಿ.ಪಂ. ಸದಸ್ಯರಾದ ಶರತ್‍ಕೃಷ್ಣಮೂರ್ತಿ, ಲೋಲಾಕ್ಷಿಬಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಸಂಧಿ ಕಲ್ಲೇಶ್, ಕೆ.ಎಂ.ಮಹೇಶ್ವರಪ್ಪ, ಭಂಡಾರಿಶ್ರೀನಿವಾಸ್, ಜಿಗಣೇಹಳ್ಳಿ ನೀಲಕಂಠಪ್ಪ ಮತ್ತಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ