ನದಿಯಲ್ಲಿ ಸ್ನಾನ ಮಾಡಲು ಹೊದ ನಾಲ್ವರು ನೀರಿನಲ್ಲಿ ಮುಳುಗಿ ಸಾವು

ಚಿಕ್ಕಮಗಳೂರು, ಮಾ.25-ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರದ ಆಶ್ರಮದ ಬಳಿ ಇರುವ ತುಂಗಾ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಒಂದೇ ಕುಟುಂಬದ ನಾಲ್ವರು ಜಲಸಮಾಧಿಯಾಗಿರುವ ಘಟನೆ ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಮಚಂದ್ರ (35), ರತ್ನಕರ(38), ನಾಗೇಂದ್ರ (24), ಪ್ರದೀಪ್(25) ಮೃತಪಟ್ಟ ದುರ್ದೈವಿಗಳು.

ಘಟನೆ ವಿವರ:
ಬೆಳಗಿನ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿವಾಸಿಗಳಾದ ನಾಗೇಂದ್ರ ರತ್ನಕರ, ಸುಧಾಕರ್ ಹಾಗೂ ಪ್ರದೀಪ್, ರಾಮಚಂದ್ರ ಅವರ ಸಂಬಂಧಿಗಳಾಗಿದ್ದು ನಿನ್ನೆ ವಿದ್ಯಾರಣ್ಯಪುರಕ್ಕೆ ತೆರಳಿದ್ದರು.

ರಾಮಚಂದ್ರ ಅವರು ಪುತ್ರ ಋತ್ವಿಕ್ ಸೇರಿದಂತೆ ಆರು ಮಂದಿ ತುಂಗಾ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದರು.ನೀರಿನಲ್ಲಿ ಎಲ್ಲರೂ ಸ್ನಾನ ಮಾಡಿ ಹೊರಗೆ ಬರುತ್ತಿದ್ದಾಗ ಪ್ರದೀಪ್ ಕಾಣಿಸಲಿಲ್ಲ. ಆತ ಸುಳಿಯಲ್ಲಿ ಸಿಲುಕಿರುವುದನ್ನು ಕಂಡು ಆತನನ್ನು ರಕ್ಷಿಸಲು ರಾಮಚಂದ್ರ, ರತ್ನಕರ, ನಾಗೇಂದ್ರ್ ತೆರಳಿದ್ದಾರೆ. ಆದರೆ ಈ ಮೂವರು ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.

ರಾಮಚಂದ್ರ ಶೃಂಗೇರಿಯ ಕಾಳಿಕಾಂಬ ಮೋಟರ್ಸ್ ಗ್ಯಾರೇಜಿನ ಮಾಲೀಕರಾಗಿದ್ದು ಇವರ ಜೊತೆ ನಾಗೇಂದ್ರ ಕೆಲಸ ಮಾಡುತ್ತಿದ್ದನು, ರತ್ನಕರ ಮರಗೆಲಸ, ಪ್ರದೀಪ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ನಿನ್ನೆ ರಜೆಯಿದ್ದ ಕಾರಣ ಎಲ್ಲರೂ ರಾಮಚಂದ್ರ ಅವರ ಮನೆಗೆ ತೆರಳಿದ್ದರು.

ಈ ವಿಷಯದ ಕೂಡಲೇ ಶಾಸಕ ರಾಜೇಗೌಡ ಸ್ಥಳಕ್ಕೆ ಭೇಟಿ ನೀಡಿದರು.ಅಗ್ನಿಶಾಮಕದಳ, ಪೊಲೀಸರು ಮೃತದೇಹಗಳನ್ನು ಹೊರಕ್ಕೆ ತೆಗೆದರು. ಈ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ