ಚೌಕಿದಾರ್ ಕಳ್ಳತನಮಾಡಿ ಸಿಕ್ಕಿಬಿದ್ದಿದ್ದರಿಂದ ಈಗ ಇಡೀ ದೇಶವನ್ನೇ ಚೌಕಿದಾರ್ ಮಾಡಿದ್ದಾರೆ: ರಾಹುಲ್ ಗಾಂಧಿ ವಾಗ್ದಾಳಿ

ಕಲಬುರಗಿ: ಚೌಕಿದಾರನ ಕಳ್ಳತನದ ಬಗ್ಗೆ ಬಯಲಾಗುತ್ತಿದ್ದಂತೆ ಇಡೀ ದೇಶದ ಜನರನ್ನೇ ಚೌಕಿದಾರರನ್ನಾಗಿ ಪ್ರಧಾನಿ ಮೋದಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಕಲಬರುಗಿಯಲ್ಲಿ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮೋದಿಯವರ ಕಳ್ಳತನ ಗೊತ್ತಾಗುತ್ತಿದ್ದಂತೆಯೇ ಈಗ ಇಡೀ ದೇಶವನ್ನೇ ಚೌಕಿದಾರ್ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.

ಅನಿಲ್ ಅಂಬಾನಿಗೆ ಲಾಭ ಮಾಡಿಕೊಡಲು ರಫೇಲ್ ಒಪ್ಪಂದ ಮಾಡಿಕೊಂಡಿದ್ದಾರೆ. ಅದಾನಿಗೆ 6 ವಿಮಾನ ನಿಲ್ದಾಣಗಳನ್ನು ಬಿಟ್ಟುಕೊಟ್ಟಿದ್ದಾರೆ. ದೇಶದ ಜನತೆಯ ಉದ್ಯೋಗಾವಕಾಶಗಳನ್ನು ಪ್ರಧಾನಿ ಮೋದಿ ನುಂಗಿಹಾಕಿದ್ದಾರೆ.’ಕಾಳಧನಕ್ಕೆ ಕಡಿವಾಣ ಹಾಕುವ ನೆಪದಲ್ಲಿ ಪ್ರಧಾನಿ ಮೋದಿ ರಾತೋರಾತ್ರಿ 500, 1000 ರೂ.ಗಳ ನೋಟುಗಳನ್ನು ಬ್ಯಾನ್ ಮಾಡಿದರು. ಆದರೆ ಕಾಳಧನಿಕರು ಮಾತ್ರ ಬ್ಯಾಂಕಿನ ಹಿಂಬಾಗಿಲಲ್ಲಿ ಬಂದು ನೋಟು ಬದಲಿಸಿಕೊಂಡು ಹೋದರು. ಜನಸಾಮಾನ್ಯರು ಮಾತ್ರ ಬ್ಯಾಂಕ್ ಮುಂದೆ ಸರತಿ ಸಾಲಿನಲ್ಲಿ ನಿಂತು ಪರದಾಡಿದರು ಎಂದು ರಾಹುಲ್ ಕಿಡಿಕಾರಿದ್ದಾರೆ

ಮೋದಿ ಸಂವಿಧಾನವನ್ನ ಕಗ್ಗೊಲೆ ಮಾಡಲು ಮುಂದಾಗಿದ್ದಾರೆ. ರಫೇಲ್ ಡೀಲ್ ಗೆ ಪ್ರಧಾನಿ ಮೊದಲು ಫ್ರಾನ್ಸ್ ಹೋಗುತ್ತಿದ್ದಂತೆ ಅನಿಲ್ ಅಂಬಾನಿ ಹೋಗುತ್ತಾರೆ.

ಈ ಮೂಲಕ 526 ಕೋಟಿಯ ಡೀಲ್ ಅನ್ನು 1600 ಕೋಟಿ ಡೀಲ್ ಮಾಡಿಕೊಳ್ಳುವ ಮೂಲಕ 30 ಸಾವಿರ ಕೋಟಿ ಹಣವನ್ನು ಜೇಬಿಗೆ ಇಳಿಸಿಕೊಳ್ಳುತ್ತಾರೆ. ಈ ಬಗ್ಗೆ ಸಿಬಿಐ ತನಿಖೆ ಮಾಡಲು ಮಂದಾದ್ರೆ ಅದನ್ನು ತಡೆಹಿಡಿದು, ಅವರನ್ನೇ ಹುದ್ದೆಯಿಂದ ಕೆಳಗಿಳಿಸಲಾಗುತ್ತೆ ಎಂದು ಆರೋಪಿಸಿದರು.

ಆರೋಗ್ಯ ವಿಮೆ ಹೆಸರಲ್ಲಿ ಸಾಮಾನ್ಯ ಜನರ ಹಣ ಕೊಳ್ಳೆ ಹೊಡೆದು, ನೀರವ್​ ಮೋದಿ, ಮೆಹೂಲ್​ ಚೋಕ್ಸಿ ಸೇರಿದಂತೆ ಇತರರ ಖಾತೆಗೆ ಹಣ ವರ್ಗಾಯಿಸಲಾಗುತ್ತಿದೆ. ರಿಸರ್ವ್​ ಬ್ಯಾಂಕ್​, ಸಿಬಿಐ ಹೀಗೆ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನ ಕೇಂದ್ರ ಎನ್ ಡಿಎ ಸರ್ಕಾರ ದುರುಪಯೋಗ ಮಾಡಿಕೊಂಡಿದೆ.

ಸುಪ್ರೀಂಕೋರ್ಟ್​ ಅಧಿಕಾರವನ್ನ ಮೋದಿ ಸರ್ಕಾರ ದುರುಪಯೋಗ ಮಾಡಿಕೊಂಡಿದೆ. ನಮಗೆ ನ್ಯಾಯ ಬೇಕು ಎಂದು ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳು ದೇಶದ ಜನರಲ್ಲಿ ಬೇಡಿಕೊಂಡಿದ್ದಾರೆ ಎಂದರು.

ಚೌಕಿದಾರ ಕಳ್ಳತನ ಮಾಡುವಾಗ ಸಿಕ್ಕಿ ಬಿದ್ದಾಗ ಇಡೀ ದೇಶ ಚೌಕಿದಾರ ಅಂತಾ ಎಂದು ಸುಳ್ಳು ಹೇಳುತ್ತಾರೆ. ನಾವು ಹೇಳಿದ್ದಂತೆ 371 ಕಲಂ ಜಾರಿಗೆ ತರುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಈಗ ಕರ್ನಾಟಕ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ರೈತರ ಸಾಲಮನ್ನಾ ಮಾಡಲಾಗಿದೆ.

ಕರ್ನಾಟಕದಲ್ಲಿ ಸಮಿಶ್ರ ಸರ್ಕಾರವಿದ್ದು, ಮಾತು ನೀಡಿದ್ದಂತೆ ರೈತರ ಸಾಲಮನ್ನಾ ಮಾಡಿದ್ದೇವೆ. ಆದರೆ ಕರ್ನಾಟಕಕ್ಕೆ ಬಂದ ಮೋದಿ ರೈತರ ಸಾಲಮನ್ನಾ ಮಾಡಿಲ್ಲ ಅಂತಾ ಹೇಳುತ್ತಾರೆ. ಆದರೆ ಇಲ್ಲಿನ ಜನರಿಗೆ ಸತ್ಯದ ಅರಿವಿದೆ. ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳಲ್ಲಿ ಯಾವ ಬೆಳೆ ರೈತರು ಬೆಳೆಯುತ್ತಾರೋ ಅದಕ್ಕೆ ಪೂರಕ ಉದ್ಯಮಗಳನ್ನು ಆರಂಭಿಸಲು ಅಲ್ಲಿನ ಸರ್ಕಾರಗಳು ನಿರ್ಣಯಿಸಿವೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಎಲ್ಲ ನಾಗರಿಕರಿಗೂ ಕನಿಷ್ಠ ಆದಾಯದ ಖಾತ್ರಿ ನೀಡುತ್ತೇವೆ. ಜನಸಾಮಾನ್ಯರಿಗೆ, ಸಣ್ಣ ವ್ಯಾಪಾರಿಗಳಿಗೆ ಆಗುತ್ತಿರುವ ತೆರಿಗೆ ತೊಂದರೆಗಳನ್ನು ಸರಿಪಡಿಸುತ್ತೇವೆ ಎಂದು ರಾಹುಲ್ ಘೋಷಿಸಿದರು. ಸರಕು ಮತ್ತು ಸೇವಾ ತೆರಿಗೆಯನ್ನು ಪದೇ ಪದೇ ‘ಗಬ್ಬರ್ ಸಿಂಗ್ ಟ್ಯಾಕ್ಸ್‌’ ಎಂದು ದೂಷಿಸಿದ ರಾಹುಲ್, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದನ್ನು ಬದಲಿಸುತ್ತದೆ ಎಂದು ಹೇಳಿದರು.

Lok sabha election,Congres,rahul gandhi,kalaburagi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ