ಲೋಕಸಭೆ ಚುನಾವಣೆಯಲ್ಲಿ 22 ಸ್ಥಾನ ಗೆದ್ದರೆ, 24 ತಾಸಿನಲ್ಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ: ಬಿಎಸ್​ವೈ ವಿಶ್ವಾಸ

ಬೆಂಗಳೂರುಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 22 ಸ್ಥಾನಗಳನ್ನು ಗೆದ್ದರೆ 24 ಗಂಟೆಗಳೊಳಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಮಂಗಳವಾರ ಯಾರಗಟ್ಟಿ ಗ್ರಾಮದಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿ, ಈ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದ ಯಡಿಯೂರಪ್ಪ “ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಜನತೆ 22 ಸ್ಥಾನಗಳಲ್ಲಿ ನಮ್ಮ ಪಕ್ಷ ಗೆಲ್ಲಿಸಿದರೆ, 24 ಗಂಟೆಗಳ ಒಳಗೆ ನಾವು ಸರ್ಕಾರ ರಚಿಸುತ್ತೇವೆ” ಎಂದಿದ್ದಾರೆ.

ಬಾಲಕೋಟ್ ನಲ್ಲಿ ನಡೆದ ಏರ್ ಸ್ಟ್ರೈಕ್ ಬಳಿಕ ಈ ವಾಯುದಾಳಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲು ನೆರವಾಗಲಿದೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದ ಬಿಎಸ್​ವೈ, ಇದೀಗ ಚುನಾವಣಾ ಆಯೋಗವು (ಇಸಿಐ) 2019 ರ ಲೋಕಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದ ಎರಡು ದಿನಗಳಲ್ಲಿ ಈ ರೀತಿ ಹೇಳಿಕೆ ನೀಡಿದ್ದು ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದಾಗಿಂದಲೂ ‘ಆಪರೇಶನ್ ಕಮಲ’ ಸದ್ದು ಮಾಡುತ್ತಲೇ ಇದೇ. ಇತ್ತೀಚಿಗೆ ಶಾಸಕರಿಗೆ ಗಾಳ ಹಾಕುವ ಸಂಬಂಧ ಜೆಡಿಎಸ್ ‘ಆಪರೇಶನ್ ಆಡಿಯೋ’ವನ್ನು ಬಿಡುಗಡೆ ಮಾಡಿತ್ತು. ಈ ಆಡಿಯೋ ಬಗ್ಗೆ ಮೊದಲಿಗೆ ಅದು ತಮ್ಮ ಧ್ವನಿಯಲ್ಲ ಎಂದು ಪ್ರತಿಕ್ರಿಯಿಸಿದ್ದ ಯಡಿಯೂರಪ್ಪ, ನಂತರದಲ್ಲಿ ಕುಮಾರಸ್ವಾಮಿ ತಮಗೆ ಬೇಕಾದ್ದನ್ನು ಮಾತ್ರ ಬಿಡುಗಡೆ ಮಾಡಿದ್ದು ಮಿಕ್ಕ ಆಡಿಯೋವನ್ನು ಕತ್ತರಿಸಿದ್ದಾರೆ(ಕಟ್) ಎಂದಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ