ಕ್ಷುಲ್ಲಕ ವಿಚಾರಕ್ಕಾಗಿ ಜಗಳ : ಮಾಜಿ ಯೋಧನ ಕೊಲೆ

ಕನಕಪುರ, ಮಾ.9- ಜೂಜಾಡುತ್ತಿದ್ದ ಗುಂಪಿನ ಜತೆ ಕ್ಷುಲ್ಲಕ ವಿಚಾರಕ್ಕಾಗಿ ಜಗಳ ನಡೆದು, ವಿಕೋಪಕ್ಕೆ ತಿರುಗಿದಾಗ ಮಾರಕಾಸ್ತ್ರಗಳಿಂದ ಮಾಜಿ ಯೋಧನನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕನಕಪುರ ಪಟ್ಟಣದ ನಿರ್ವಾಣೇಶ್ವರ ನಗರದ ನಿವಾಸಿ ಶಿವರಾಜು ಅಲಿಯಾಸ್ ಶಿವಾಜಿ (32) ಕೊಲೆಯಾದ ಸಿಆರ್‍ಪಿಎಫ್ ಮಾಜಿ ಯೋಧ.

ಈ ಹಿಂದೆ ಯೋಧನಾಗಿ ಅಸ್ಸಾಂನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶಿವರಾಜು ಕಳೆದ 6ವರ್ಷದ ಹಿಂದೆ ಕೆಲಸದಿಂದ ನಿವೃತ್ತಿಗೊಂಡು ಪಟ್ಟಣಕ್ಕೆ ಹಿಂದಿರುಗಿದ್ದರು.

ಕೌಟುಂಬಿಕ ವಿಚಾರವಾಗಿ ಪತ್ನಿ ಜತೆ ಜಗಳವಾಡಿ ಆಕೆಯನ್ನು ತೊರೆದು, ಮತ್ತೊಂದು ಮದುವೆಯಾಗಿ ನಿರ್ವಾಣೇಶ್ವರ ನಗರದಲ್ಲಿ ವಾಸವಾಗಿದ್ದ ಶಿವರಾಜು ಸಿಂಡಿಕೇಟ್ ಬ್ಯಾಂಕಿನಲ್ಲಿ ಸೆಕ್ಯೂರಿಟಿ ಕೆಲಸ ನಿರ್ವಹಿಸುತ್ತಿದ್ದರು.

ಕರ್ತವ್ಯಕ್ಕೆ ಸರಿಯಾಗಿ ಹೋಗದ ಕಾರಣ ಈ ಕೆಲಸವನ್ನು ಸಹ ಕಳೆದುಕೊಂಡಿದ್ದ ಶಿವರಾಜು ದುಶ್ಚಟಗಳಿಗೆ ದಾಸನಾಗಿ ಕುಡಿತ, ಜೂಜಾಟದಲ್ಲಿ ತೊಡಗಿದ್ದ.

ತಾನು ವಾಸ ಮಾಡುತ್ತಿದ್ದ ಬಡಾವಣೆಯ ಗುಂಪೊoದರ ಜತೆ ಸೇರಿಕೊಂಡಿದ್ದ ಈತ ನಿನ್ನೆ ಸಂಜೆ 4.30ರ ಸಮಯದಲ್ಲಿ ಬಾಣತಮಾರಮ್ಮ ಬೆಟ್ಟದ ಬಳಿ ಎಲ್ಲರೂ ಜೂಜಾಡಲು ತೆರಳಿದ್ದಾರೆ.

ಈ ವೇಳೆ ಗುಂಪಿನಲ್ಲಿ ಕ್ಷುಲ್ಲಕ ವಿಚಾರವಾಗಿ ಶಿವರಾಜನಿಗೂ ಹಾಗೂ ಉಳಿದವರ ಮಧ್ಯೆ ನಡೆದ ಜಗಳ ವಿಕೋಪಕ್ಕೆ ತಿರುಗಿದಾಗ ಮಾರಕಾಸ್ತ್ರಗಳಿಂದ ಶಿವರಾಜನ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿ ಗುಂಪು ಪರಾರಿಯಾಗಿದೆ.

ಸುದ್ದಿ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಶಿವರಾಜು ಅವರ ಸಹೋದರ ಲಿಂಗರಾಜು ದೂರು ನೀಡಿದ್ದು ಕೂಡಲೇ ಆರೋಪಿಗಳನ್ನು ಬಂಧಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ