ಅಕ್ರಮವಾಗಿ ಮರಳು ತುಂಬುತ್ತಿದ್ದನ್ನು ಪ್ರಶ್ನಿಸಿದ ಮಹಿಳೆಯ ಮೆಲೆ ಹಲ್ಲೆ

ಕುಣಿಗಲ್, ಮಾ.8- ಜಮೀನಿನಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದ ವೇಳೆ ಅದನ್ನು ಪ್ರಶ್ನಿಸಿದ ಜಮೀನಿನ ಮಾಲೀಕರಾದ ಮಹಿಳೆಯರ ಮೇಲೆ ಹಲ್ಲೆ ಮಾಡಿರುವ ಘಟನೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಾಲೂಕಿನ ಕೊತ್ತಗೆರೆ ಹೋಬಳಿ ಸೊಬಗನಹಳ್ಳಿ ಗ್ರಾಮದ ಮೂಕ ಮಹಿಳೆ ಸಿದ್ದಗಂಗಮ್ಮ ಮತ್ತು ಈಕೆಯ ವೃದ್ಧ ತಾಯಿ ಜಯಮ್ಮ ಹಲ್ಲೆಗೊಳಗಾದವರು.

ಅದೇ ಗ್ರಾಮದ ರಾಮಚಂದ್ರ ಮತ್ತು ಈತನ ಮಗ ಹನುಮಂತ ಇಬ್ಬರು ಸಿದ್ದಗಂಗಮ್ಮ ಅವರ ಜಮೀನಿನಲ್ಲಿ ಟ್ರಾಕ್ಟರ್‍ಗೆ ಮರಳು ತುಂಬುತ್ತಿರುವುದನ್ನು ಕಂಡ ಸಿದ್ದಗಂಗಮ್ಮ ಪ್ರಶ್ನಿಸಿದ್ದಾಳೆ. ಈ ವೇಳೆ ರಾಮಚಂದ್ರ, ಹನುಮಂತ ಇಬ್ಬರೂ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ಕಂಡ ತಾಯಿ ಜಯಮ್ಮ ಸ್ಥಳಕ್ಕೆ ಬಂದು ತಡೆದಾಗ ಆಕೆಯ ಮೇಲೂ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಸ್ಥಳೀಯರು ಸ್ಥಳಕ್ಕೆ ಬಂದು ನೋಡುವಷ್ಟರಲ್ಲಿ ತಂದೆ-ಮಗ ಇಬ್ಬರೂ ಪರಾರಿಯಾಗಿದ್ದಾರೆ.

ಜಯಮ್ಮನ ಕೈ ಮೂಳೆ ಮುರಿದಿದ್ದು, ಸಿದ್ದಗಂಗಮ್ಮನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ