ಸ್ನೇಹಿತನನ್ನೇ ಕೊಲೆ ಮಾಡಿದ್ದ ಮೂವರು ಆರೋಪಿಗಳ ಬಂಧನ

ಕನಕಪುರ, ಮಾ.7- ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಸಂಶಯದಿಂದ ಸ್ನೇಹಿತನನ್ನೇ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಹಾರೋಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಬನಶಂಕರಿ ವಾಸಿ ಆಟೋ ಚಾಲಕ ದೇವರಾಜ್ (30) ಎಂಬಾತನ ತಲೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಆರೋಪಿಗಳಾದ ಆಂಬುಲೆನ್ಸ್ ಚಾಲಕ ದೀಪು (25), ಕಾರು ಚಾಲಕ ಅರುಣ್ (24), ಕಲಂಗಡಿ ಹಣ್ಣಿನ ವ್ಯಾಪಾರಿ ರಘುರಾಮ್ (24) ಬಂಧಿತರು.

ಬನಶಂಕರಿ ಬಡಾವಣೆ ಆಟೋ ಚಲಕನಾಗಿದ್ದ ದೇವರಾಜ್ ಸ್ನೇಹಿತನಾದ ಅರುಣ್ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಸಂಶಯದೊಂದಿಗೆ ದೇವರಾಜನಿಗೆ ಬೆದರಿಕೆ ಹಾಕುವ ಉದ್ದೇಶದಿಂದ ಆರೋಪಿಗಳೇಲ್ಲರು ಸೇರಿ ಟಯೋಟಾ ಇಟೋಸ್ ಕಾರಿನಲ್ಲಿ ಹಾರೋಹಳ್ಳಿ ಸಮೀಪದ ದೊಡ್ಡ ಬಾದಗೆರೆ ಮೊರಾರ್ಜಿದೇಸಾಯಿ ವಸತಿ ಶಾಲೆ ಬಳಿ ಪಾರ್ಟಿ ಮಾಡಲು ಕುಳಿತಿದ್ದಾರೆ. ನಂತರ ಕುಡಿದ ಮತ್ತಿನಲ್ಲಿ ವಾದ-ವಿವಾದ ಪ್ರಾರಂಭವಾಗಿ ದೇವರಾಜನಿಗೆ ಹಲ್ಲೆ ಮಾಡಲಾಗಿದೆ.

ಪಾನಮತ್ತರಾಗಿದ್ದ ಆರೋಪಿಗಳು ಕಾರಿನ ಜಾಕ್‍ರಾಡ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಅಲ್ಲದೇ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾರೆ.

ನಂತರ ಆರೋಪಿಗಳು ಕುಡಿದ ಮತ್ತಿನಲ್ಲಿ ಕಗ್ಗಲೀಪುರದ ಬಳಿ ರಕ್ತದ ಕಲೆಗಳಾಗಿದ್ದ ಬಟ್ಟೆಗಳನ್ನು ಧರಿಸಿಕೊಂಡು ತೆರಳುತಿದ್ದ ವೇಳೆ ಕತೃವ್ಯದಲ್ಲಿದ್ದ ಪೊಲೀಸರು ಇವರನ್ನು ಬಂಧಿಸಿ ಠಾಣೆಗೆ ತಂದು ವಿಚಾರಣೆಗೆ ಒಳಪಡಿಸಿದ್ದಾರೆ.

ಈ ವೇಳೆ ಆರೋಪಿಗಳು ಮೊರರ್ಜಿ ದೇಸಾಯಿ ವಸತಿ ಶಾಲೆ ಬಳಿ ಸ್ನೇಹಿತನನ್ನು ಕೊಂದ ವಿಚಾರದ ಬಗ್ಗೆ ತಿಳಿಸಿದ್ದಾರೆ.

ಆರೋಪಿಗಳನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಡಿವೈಎಸ್‍ಪಿ ಪುರುಷೋತ್ತಮ್, ಸರ್ಕಲ್ ಇನ್ಸ್‍ಪೆಕ್ಟರ್ ಪ್ರಕಾಶ್, ಎಸ್‍ಐ ಧರ್ಮೇಗೌಡ ಮತ್ತು ಸಿಬ್ಬಂದಿಗಳು ಕಾರ್ಯ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ