ಮಂಡ್ಯ : ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯ ರೂಪಿಸಲು ಮುಂದಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಇದಕ್ಕಾಗಿ ಮಂಡ್ಯವನ್ನು ಆಯ್ಕೆ ಮಾಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಈ ಕ್ಷೇತ್ರ ಜೆಡಿಎಸ್ ಭದ್ರಕೋಟೆ ಜೊತೆ ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರ. ಇಲ್ಲಿಂದ ಮಗನನ್ನು ನಿಲ್ಲಿಸಿದರೆ ಸುಲಭವಾಗಿ ಗೆಲ್ಲಿಸಬಹುದು ಎಂಬ ಆಸೆಗೆ ಈಗ ತಣ್ಣೇರೆರಚಿದಂತೆ ಆಗಿದೆ. ನಿಖಿಲ್ ಒಂದು ವೇಳೆ ಈ ಕ್ಷೇತ್ರದಲ್ಲಿ ನಿಂತರೆ ಸೋಲು ಖಚಿತ ಎನ್ನುತ್ತಿದೆ ಗುಪ್ತಚಾರ ಮಾಹಿತಿ. ಇದಕ್ಕೆ ಕಾರಣ ಸುಮಲತಾ ಅಂಬರೀಷ್.
ಮಂಡ್ಯ ಕ್ಷೇತ್ರದ ಬಲಾ ಬಲಗಳ ವಿಚಾರ ಕುರಿತು ಸಿಎಂ ಕುಮಾರಸ್ವಾಮಿಗೆ ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಇಲ್ಲಿ ನಿಖಿಲ್ಗೆ ಸೋಲು ಎದುರಾಗಲಿದೆ ಎನ್ನಲಾಗಿದೆ. ಈ ವಿಚಾರ ಸಿಎಂ ನಿದ್ದೆಗೆಡಿಸಿದೆ. ಇದೇ ಕಾರಣಕ್ಕೆ ನಿಖಿಲ್ ಅವರನ್ನು ಮಂಡ್ಯದಿಂದ ಕಣಕ್ಕೆ ಇಳಿಸದೇ ಇರಲು ನಿರ್ಧರಿಸಲಾಗಿದ್ದು, ಪಕ್ಕದ ಮೈಸೂರು ಜಿಲ್ಲೆಗೆ ಕಣ್ಣು ಹಾಯಿಸಲಾಗಿದೆ ಎಂಬ ಮಾತು ಕೂಡ ಕೇಳಿ ಬಂದಿದೆ.
ಮಂಡ್ಯದಲ್ಲಿ ಈಗಾಗಲೇ ಅಂಬರೀಷ್ ಅನುಕಂಪದ ಅಲೆ ಮೂಡಿದೆ. ಸುಮಲತಾಗೆ ರಾಜಕೀಯಕ್ಕೆ ಇಳಿಯುವಂತೆ ಪ್ರೇರಿಪಿಸಿದ್ದ ಜನ ಅವರ ಬೆನ್ನಿಗೆ ನಿಂತಿದ್ದಾರೆ. ಅವರು ಸುಲಭವಾಗಿ ಜಯ ಸಾಧಿಸಲಿದ್ದಾರೆ. ಅಲ್ಲದೇ ಕಾಂಗ್ರೆಸ್ ನಾಯಕರನ್ನು ಈಗಾಗಲೇ ಭೇಟಿ ಮಾಡಿರುವ ಸುಮಲತಾಗೆ ಮೈತ್ರಿ ನಾಯಕರು ಪರೋಕ್ಷ ಬೆಂಬಕ ನೀಡಿದ್ದಾರೆ ಎಂದು ಕೂಡ ಹೇಳಲಾಗಿದೆ. ಇಂತಹ ಸಂದರ್ಭದಲ್ಲಿ ನಿಖಿಲ್ ನಿಂತರೆ ಕೆಲವು ಕಷ್ಟ ಎನ್ನುತ್ತಿದೆ ಲೆಕ್ಕಾಚಾರ.
ಮಗನ ರಾಜಕೀಯ ಭವಿಷ್ಯಕ್ಕಾಗಿ ಈಗಾಗಲೇ ಅವರು ಅಲ್ಲಿ ಸಿನಿಮಾ ಚಿತ್ರೀಕರಣ, ಪ್ರದರ್ಶನ ಎಲ್ಲಾ ತಂತ್ರ ನಡೆಸಿದ್ದರು. ಅದು ಯಾವುದು ಕೂಡ ಅವರಿಗೆ ಬೆಂಬಲವಾಗುವುದಿಲ್ಲ ಎನ್ನಲಾಗಿದೆ. ಇನ್ನು ಸುಮಲತಾ ಕಾಂಗ್ರೆಸ್ ಟಿಕೆಟ್ ನೀಡದಿದ್ದರೂ ಪಕ್ಷೇತರವಾಗಿ ಸ್ಪರ್ಧಿಸಿದರೆ, ಅವರ ಬೆಂಬಲಕ್ಕೆ ಇಡೀ ಚಿತ್ರರಂಗವೇ ಸಕ್ಕರೆ ನಾಡಿನಲ್ಲಿ ನಿಂತು ಕೂಡ ಪ್ರಚಾರ ಹಮ್ಮಿಕೊಳ್ಳುವುದು ಕೂಡ ಖಚಿತವಾಗಿದೆ.