ಜೈಷ್​ ಶಿಬಿರದ ಮೇಲೆ ಭಾರತೀಯ ವಾಯುಸೇನೆ ದಾಳಿ ಮಾಡಿದ್ದು ನಿಜ; ಸತ್ಯ ಒಪ್ಪಿಕೊಂಡ ಮಸೂದ್ ಸಹೋದರ

ನವದೆಹಲಿ: ಪಾಕಿಸ್ತಾನದ ಬಾಲಕೋಟ್​ನಲ್ಲಿ ಭಾರತೀಯ ವಾಯುಸೇನೆ ದಾಳಿಯನ್ನೇ ನಡೆಸಿಲ್ಲ ಎಂದು ನೆರೆಯ ರಾಷ್ಟ್ರ ಹೇಳಿಕೊಳ್ಳುತ್ತಾ ಬರುತ್ತಿದೆ. ಆದರೆ, ಬಾಲ್​​ಕೋಟ್​ನಲ್ಲಿರುವ ಉಗ್ರ ಶಿಬಿರಗಳನ್ನು ಭಾರತ ನಾಶ ಮಾಡಿದ್ದು ಹೌದು ಎಂದು ಸ್ವತಃ ಜೈಷ್​​-ಇ-ಮೊಹ್ಮದ್​ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್​ ಅಜರ್​ ಸಹೋದರ ಮೌಲಾನಾ ಅಮ್ಮರ್​ ಒಪ್ಪಿಕೊಂಡಿದ್ದಾನೆ. ಇದು ಪಾಕಿಸ್ತಾನಕ್ಕೆ ಇರಿಸುಮುರಿಸು ಉಂಟು ಮಾಡಿದೆ.

ಅಮ್ಮರ್​ ಮಾತನಾಡಿರುವ ಆಡಿಯೋ ಕ್ಲಿಪ್​ ಸಿಎನ್​ಎನ್​-ನ್ಯೂಸ್​ 18ಗೆ ಲಭ್ಯವಾಗಿದ್ದು, ಅದರಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. “ಭಾರತೀಯ ವಾಯುಪಡೆ ಐಎಸ್​ಐ ಅಥವಾ ಪಾಕಿಸ್ತಾನದ ಸೇನೆಯ ಮೇಲೆ ದಾಳಿ ನಡೆಸಿಲ್ಲ. ಅವರು ಅಟ್ಯಾಕ್ ಮಾಡಿದ್ದು ಜಿಹಾದ್​ ವಿಚಾರವನ್ನು ಕಲಿಯುತ್ತಿರುವ ವಿದ್ಯಾರ್ಥಿಗಳ ಮೇಲೆ,” ಎಂದಿದ್ದಾನೆ ಅಮ್ಮರ್​. ಬಾಲ್​ಕೋಟ್​ ದಾಳಿಯಲ್ಲಿ ಐಎಸ್​ಐನ ಕರ್ನಲ್​ ಸಲೀಮ್​ ಖ್ವಾರಿ ಹಾಗೂ ಜೈಷ್​​​ ತರಬೇತುದಾರ ಮೌಲಾನ್​ ಮೋಯಿನ್​ ಕೂಡ ಸತ್ತಿದ್ದಾನೆ ಎನ್ನಲಾಗಿದೆ.

ಪಾಕಿಸ್ತಾನದ ಬಾಲ್​ಕೋಟ್​ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿತ್ತು. ಈ ವೇಳೆ ಅಲ್ಲಿನ ಉಗ್ರ ಶಿಬಿರಗಳು ದಾಳಿಗೆ ತುತ್ತಾಗಿದ್ದವು ಎಂದು ಭಾರತೀಯ ಸೇನೆ ಹೇಳಿಕೊಂಡಿತ್ತು. ದಾಳಿ ವೇಳೆ 300ಕ್ಕೂ ಅಧಿಕ ಭಯೋತ್ಪಾದಕರು ನಾಶಗೊಂಡಿದ್ದಾರೆ ಎನ್ನಲಾಗಿದೆ. ಆದರೆ, ಪಾಕಿಸ್ತಾನ “ ಈ ಸುದ್ದಿ ಸುಳ್ಳು. 300 ಜನ ಸತ್ತಿದ್ದಾರೆ ಎಂದಾದರೆ ಅವರ ಶವವಾದರೂ ಇರಬೇಕಲ್ಲ. ಯಾವ ರಾಷ್ಟ್ರದವರು ಬೇಕಾದರೂ ಬಂದು ಈ ಭಾಗದಲ್ಲಿ ಮುಕ್ತವಾಗಿ ಪರಿಶೀಲನೆ ನಡೆಸಬಹುದು,” ಎಂದು ಪಾಕಿಸ್ತಾನ ಸವಾಲು ಹಾಕಿತ್ತು. ಈ ದಾಳಿ ನಂತರದಲ್ಲಿ ಉಭಯ ರಾಷ್ಟ್ರಗಳ ನಡುವಿನ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ