ಉಲ್ಟಾಹೊಡೆದ ಬಿಎಸ್ ವೈ; ತಮ್ಮ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ ಎಂದ ಯಡಿಯೂರಪ್ಪ

ಬೆಂಗಳೂರು: ಉಗ್ರರ ವಿರುದ್ಧ ಭಾರತೀಯ ಸೇನೆ ವೈಮಾನಿಕ ದಾಳಿ ಕುರಿತು ರಾಜಕೀಯ ಲೆಕ್ಕಾಚಾರ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪರ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಯಡಿಯೂರಪ್ಪ ಈಗ ಉಲ್ಟಾ ಹೊಡೆದಿದ್ದು, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ.

ಬಿಜೆಪಿ ಕೆಲ ನಾಯಕರು, ಉಗ್ರರ ವಿರುದ್ಧದ ಸೇನಾ ದಾಳಿಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿವುದಕ್ಕೆ ವಿದೇಶಾಂಗ ಇಲಾಖೆಯ ರಾಜ್ಯ ಸಚಿವರಾಗಿರುವ ವಿ.ಕೆ.ಸಿಂಗ್ ಅವರು ಟ್ವಿಟ್ಟರ್ ನಲ್ಲೇ ಗುಡುಗಿದ್ದು, ನಮ್ಮ ದೇಶದ ಕಾರ್ಯಾಚರಣೆ ಚುನಾವಣೆಯಲ್ಲಿ ಕೆಲವು ಎಕ್ಸ್ ಟ್ರಾ ಸೀಟುಗಳನ್ನು ಗೆಲ್ಲಲು ಮಾಡಿದ್ದಲ್ಲ. ದೇಶದ ಹಿತದೃಷ್ಟಿಯಿಂದ ಹಾಗೂ ಜನರ ಸುರಕ್ಷತೆಗಾಗಿ ನಾವು ಈ ಕಾರ್ಯಾಚರಣೆ ಮಾಡಿದ್ದೇವೆ ಎಂದು ಖಡಕ್ ಆಗಿ ತಿಳಿಸಿದ್ದಾರೆ.

ಇದರ ಬೆನ್ನಲ್ಲೇ ಯಡಿಯೂರಪ್ಪ ತಮ್ಮ ಹೇಳಿಕೆ ಕುರಿತು ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿದ ಬಿ ಎಸ್ ವೈ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಪ್ರಸಕ್ತ ರಾಷ್ಟ್ರದಲ್ಲಿ ಬಿಜೆಪಿಗೆ ಪೂರಕವಾದ ವಾತಾವರಣವಿದೆ ಎಂದಷ್ಟೇ ನಾನು ಹೇಳಿರುವುದು ಎಂದು ಸಮರ್ಥಿಸಿಕೊಂಡಿದ್ದಾರೆ.

ಉಗ್ರರ ಮೇಲೆ ಭಾರತದ ವಾಯುಸೇನೆ ದಾಳಿಯ ಪರಿಣಾಮ ರಾಜ್ಯದಲ್ಲಿ 22 ಕ್ಕೂ ಹೆಚ್ಚು ಲೋಕಸಭೆ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ಉಗ್ರರ ನೆಲೆಗಳ ಮೇಲೆ ಯಶಸ್ವಿಯಾಗಿ ನಡೆದ ಏರ್ ಸ್ಟ್ರೈಕ್ ನಿಂದಾಗಿ ದೇಶದಲ್ಲಿ ಬಿಜೆಪಿ ಪರ ಉತ್ತಮ ಅಲೆಯಿದೆ. ಭಾರತದಲ್ಲಿ ಇಂದಿನ ವಾತಾವರಣ ಭಾರತೀಯ ಜನತಾ ಪಕ್ಷದ ಪರವಾಗಿದೆ. ಪಾಕಿಸ್ತಾನದ ಒಳಗೆ ನುಗ್ಗಿ ನಮ್ಮ ವಾಯುಸೇನೆ ಉಗ್ರರ ನೆಲೆ ನಾಶ ಮಾಡಿದ್ದು ಸಂತೋಷವಾಗಿದೆ. ಅಲ್ಲದೇ 40 ವರ್ಷದ ಬಳಿಕ ಉಗ್ರ ನೆಲೆಗಳನ್ನು ಉಡೀಸ್ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಪರ ಅಲೆ ಇದೆ. ರಾಜ್ಯದಿಂದ 22 ಸಂಸದರನ್ನು ಕರೆದ್ಯೊಯ್ದು ಮೋದಿ ಅವರಿಗೆ ನಮ್ಮ ಕಾಣಿಕೆ ಕೊಡಬೇಕಿದೆ ಎಂದು ಹೇಳಿದ್ದರು.

Air strike,B S Yeddyurappa,statement

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ