ಬಿಜೆಪಿಗೆ ಕರ್ನಾಟಕ ದಕ್ಷಿಣ ಭಾರತದ ಹೆಬ್ಬಾಗಿಲು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ

ಬೆಂಗಳೂರು,ಫೆ.22-ರಾಜ್ಯದಲ್ಲಿಈ ಬಾರಿ 25 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿಯೊಂದಿಗೆ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಂಡು ಗೆಲುವಿಗೆ ಶ್ರಮಿಸಬೇಕೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ಕಳೆದ ರಾತ್ರಿ ಬೆಂಗಳೂರಿನ ಹೊರವಲಯದ ರೆಸಾರ್ಟ್‍ನಲ್ಲಿ ಪಕ್ಷದ ಪ್ರಮುಖರ ಜೊತೆ ಸಭೆ ನಡೆಸಿದ ಅಮಿತ್ ಷಾ, ಬಿಜೆಪಿಗೆ ಕರ್ನಾಟಕ ದಕ್ಷಿಣ ಭಾರತದ ಹೆಬ್ಬಾಗಿಲು ಎಂಬುದನ್ನು ಯಾರೊಬ್ಬರೂ ಮರೆಯಬಾರದು.

ಇಲ್ಲಿಂದಲೇ ಹೆಚ್ಚು ಸ್ಥಾನ ಗೆದ್ದು ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಕಾರ್ಯಕರ್ತರು ತಮ್ಮೆಲ್ಲಾ ಹಿತಾಸಕ್ತಿಗಳನ್ನು ಮರೆತು ಅಭ್ಯರ್ಥಿಗಳ ಗೆಲುವಿಗೆ ಪಣ ತೊಡುವಂತೆ ಸಲಹೆ ಮಾಡಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದರೂ ದೋಸ್ತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. 2014ರ ಲೋಕಸಭೆ ಚುನಾವಣೆ ವೇಳೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು.

ಅಂತಹ ಪ್ರಬಲ ನಾಯಕತ್ವ ಇದ್ದಾಗಲೂ ನಾವು 17 ಲೋಕಸಭಾ ಕ್ಷೇತ್ರಗಳನ್ನು ಗೆದ್ದಿದ್ದೇವೆ. ಬೆಳಗಾವಿ, ಚಿಕ್ಕೋಡಿ, ರಾಯಚೂರು ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಇನ್ನಷ್ಟು ಶ್ರಮ ವಹಿಸಿದ್ದರೆ ಈ ಮೂರು ಕ್ಷೇತ್ರಗಳಲ್ಲಿ ಗೆಲ್ಲಬಹುದಿತ್ತು.

ರಾಜ್ಯ ಸರ್ಕಾರದ ಬಗ್ಗೆ ಜನರಿಗೆ ಹೇಳಿಕೊಳ್ಳುವಂತಹ ಸದಾಭಿಪ್ರಾಯ ಎಲ್ಲಿಯೂ ಕೇಳಿಬರುತ್ತಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ಕಾರಣಕ್ಕಾಗಿ ತಮ್ಮ ವೈಮನಸ್ಸುಗಳನ್ನು ಮರೆತು ಒಂದಾಗಿರಬಹುದು. ಆದರೆ ವಾಸ್ತವವೇ ಬೇರೆ ಇದೆ.

ಈಗಲೂ ಅನೇಕ ಕಡೆ ಉಭಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರೇ ಹಾದಿಬೀದಿಯಲ್ಲಿ ಬಡಿದಾಡಿಕೊಂಡು ಕಿತ್ತಾಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಹೆಚ್ಚಿನ ಸ್ಥಾನ ಗೆಲ್ಲಲು ಪ್ರತಿಯೊಬ್ಬರೂ ಮುಂದಾಗಬೇಕೆಂದು ಷಾ ಸೂಚಿಸಿರುವುದಾಗಿ ತಿಳಿದುಬಂದಿದೆ.

ಸಮ್ಮಿಶ್ರ ಸರ್ಕಾರ ಲೋಕಸಭೆ ಚುನಾವಣೆ ನಂತರ ಯಾವುದೇ ಕಾರಣಕ್ಕೂ ಅಧಿಕಾರದಲ್ಲಿ ಮುಂದುವರೆಯುವುದಿಲ್ಲ. ಹಾವು-ಮುಂಗುಸಿಯಂತಿದ್ದವರು ಎಷ್ಟು ದಿನ ಕೈ ಕೈ ಹಿಡಿದುಕೊಂಡು ಮುನ್ನಡೆಯುತ್ತಾರೆ.

ನಮ್ಮಲ್ಲಿ ಉಂಟಾದ ಕೆಲವು ಪ್ರಮಾದಗಳಿಂದಾಗಿ ಸದ್ಯಕ್ಕೆ ದೋಸ್ತಿ ಸರ್ಕಾರ ಬೀಸೋ ದೊಣ್ಣೆಯಿಂದ ಪಾರಾಗಿರಬಹುದು. ಈಗಲೂ ಪರಸ್ಪರ ಒಬ್ಬರ ಮುಖ ಮತ್ತೊಬ್ಬರು ನೋಡಲಾಗದಂತಹ ಸ್ಥಿತಿ ಇದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಹೊಂದಾಣಿಕೆಯೇ ಆಗುತ್ತಿಲ್ಲ.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ಕಾರಣಕ್ಕಾಗಿ ಒಂದಾಗಿದ್ದಾರೆ ಹೊರತು ಪರಿಸ್ಥಿತಿ ಏನೂ ಸುಧಾರಿಸಿಲ್ಲ. ಇದನ್ನು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಟ್ಟು ಹೆಚ್ಚಿನ ಸ್ಥಾನ ಗೆಲ್ಲಲು ಶ್ರಮ ವಹಿಸುವಂತೆ ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ.

ಮುಂದಿನ ತಿಂಗಳು ಲೋಕಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಬಹುದು. ಅಭ್ಯರ್ಥಿಗಳ ಆಯ್ಕೆ ಹಾಲಿ ಸಂಸದರಿಗೆ ಟಿಕೆಟ್ ನೀಡುವ ಬಗ್ಗೆ ನೀವು ತಲೆ ಕೆಡಸಿಕೊಳ್ಳಬೇಡಿ. ಕೇಂದ್ರ ವರಿಷ್ಠರು ಯಾರಿಗೆ ಯಾವ ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂಬುದನ್ನು ನಿರ್ಧರಿಸುತ್ತಾರೆ.

ಕಾರ್ಯಕರ್ತರು ಮತ್ತು ಮುಖಂಡರು ಅಭ್ಯರ್ಥಿಗಳನ್ನು ಗೆಲ್ಲಿಸುವುದಷ್ಟೇ ಗುರಿಯಾಗಿಟ್ಟುಕೊಂಡು ಸಂಘಟನೆಯಲ್ಲಿ ತೊಡಗಬೇಕು. ಈ ಬಾರಿ ಕರ್ನಾಟಕದಿಂದ ನಾವು ಹೆಚ್ಚಿನ ಸ್ಥಾನವನ್ನು ನಿರೀಕ್ಷೆ ಮಾಡಿದ್ದೇವೆ. ಇದಕ್ಕೆ ಪೂರವಕಾದ ವಾತಾವರಣ ಇರುವುದರಿಂದ ಚುನಾವಣೆಗೆ ಸಿದ್ಧರಾಗಬೇಕೆಂದು ಅಮಿತ್ ಷಾ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ