1 ಸಾವಿರ ಇಂಗ್ಲೀಷ್ ಮತ್ತು ಕನ್ನಡ ಮಾಧ್ಯಮ ಶಾಲೆಗಳನ್ನು ಆರಂಭಿಸಲಾಗುವುದು: ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದಲೇ ಒಂದು ಸಾವಿರ ಇಂಗ್ಲೀಷ್ ಮತ್ತು ಕನ್ನಡ ಮಾಧ್ಯಮ ಶಾಲೆಗಳನ್ನು ಆರಂಭಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ನಗರದ ಮಹಾರಾಣಿ ಕಾಲೇಜಿನಲ್ಲಿ ಉನ್ನತ ಶಿಕ್ಷಣದಲ್ಲಿ ಮರುಸಂಶೋಧನೆಯ ಅವಕಾಶಗಳು ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳಿಗೆ ಯಾವ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು ಎಂಬುದನ್ನು ತೀರ್ಮಾನಿಸಬೇಕು, ಉಳ್ಳವರಿಗೆ ಒಂದು, ಇಲ್ಲದವರಿಗೊಂದು ಆಗುವುದು ಬೇಡ.

ಕನ್ನಡ ಭಾಷೆಯನ್ನು ತುಳಿಯುವ ಪ್ರಯತ್ನವಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಖಾಸಗಿ ಶಾಲೆ ಮಕ್ಕಳಿಗಿಂತ ಸರ್ಕಾರಿ ಶಾಲೆಯ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು, ಚೆನ್ನಾಗಿ ಬೆಳೆಯಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ. ಖಾಸಗಿ ಶಾಲೆಯ ರೀತಿಯಲ್ಲೇ ಮೇ ತಿಂಗಳಿನಿಂದಲೇ ಶಾಲೆಗಳನ್ನು ಆರಂಭಿಸಲು ಚಿಂತಿಸಲಾಗಿದೆ ಎಂದರು.

ಶಿಕ್ಷಕರು ರಜೆ ಬೇಕೆನ್ನುತ್ತಾರೆ. ಆದರೆ ಮಕ್ಕಳ ಹಿತದೃಷ್ಟಿಯಿಂದ ಸಹಕರಿಸಬೇಕು. ನಿಮ್ಮ ಸಮಸ್ಯೆ ನಮ್ಮ ಬಳಿ ಹೇಳಿಕೊಂಡರೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು ಎಂದರು.

ಶಿಕ್ಷಣ ಬಡ ಕುಟುಂಬದ ಮಕ್ಕಳಿಗೆ ಆರ್ಥಿಕವಾಗಿ ದುಬಾರಿಯಾಗುತ್ತದೆ.ಸರ್ಕಾರದ ವತಿಯಿಂದ ಉನ್ನತ ಶಿಕ್ಷಣ ನೀಡುವ ಹಂಬಲವೂ ಇದೆ. ಸರ್ಕಾರದ ಮುಂದೆ ಹಲವಾರು ಸವಾಲುಗಳಿವೆ. ತಾವು 12 ವರ್ಷಗಳ ಹಿಂದೆ ಸಿಎಂ ಆಗಿದ್ದಾಗ 15 ರಿಂದ 16 ಕೋಟಿ ರೂ.ಅನುದಾನವನ್ನು ಬಿಡುಗಡೆ ಮಾಡಬೇಕೆಂಬ ತೀರ್ಮಾನ ಮಾಡಲಾಗಿತ್ತು. ಈ ಕಾಲೇಜಿಗೆ ಮೂಲಸೌಲಭ್ಯ ಒದಗಿಸಲು ಆಗ ತೀರ್ಮಾನಿಸಲಾಗಿತ್ತು ಎಂದು ಸ್ಮರಿಸಿದರು.

ವಿದ್ಯಾರ್ಥಿಗಳು ಸಮಸ್ಯೆಗಳನ್ನು ತಮ್ಮ ನಾಯಕರ ಮೂಲಕ ತಮ್ಮ ಗಮನಕ್ಕೆ ತಂದರೆ ಪರಿಹರಿಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಕಾಲೇಜಿಗೆ ಬರಲು ರಸ್ತೆ ದಾಟುವುದು ತುಂಬಾ ಕಷ್ಟವಾಗುತ್ತಿತ್ತು. ಹಾಗಾಗಿ ಮೇಲ್ಸೇತುವೆ ನಿರ್ಮಾಣ ಮಾಡಲಾಯಿತು. ಇದೀಗ ಕಾಲೇಜು ಮುಂಭಾಗ ಎಕ್ಸಲೇಟರ್ ಹಾಕಿಸುವ ಯೋಚನೆ ಇದೆ ಎಂದು ಹೇಳಿದರು.

ಶಿಕ್ಷಣದಲ್ಲಿ ಗುಣಮಟ್ಟ ಕಾಪಾಡುವ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪೋಷಕರು ಸಹಕರಿಸಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ