ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಗುಂಟೂರು: ಪಕ್ಷ ಬದಲಾವಣೆ, ನಂಬಿಕೆ ದ್ರೋಹ ಮಾಡುವುದರಲ್ಲಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಿಸ್ಸೀಮರು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರ ಎನ್​ಡಿಎ ಮೈತ್ರಿಕೂಟದಿಂದ ಹೊರಬಿದ್ದ ಬಳಿಕ ಇದೇ ಮೊದಲ ಬಾರಿಗೆ ಇಂದು ಆಂಧ್ರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು , ರಾಜ್ಯದ ಅಭಿವೃದ್ಧಿ ಮರೆತು ತಮ್ಮ ಕುಟುಂಬದ ಬಗ್ಗೆ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ, ಆಂಧ್ರಪ್ರದೇಶವನ್ನು ಬೆಳಗಿಸುತ್ತೇನೆ ಎಂದು ಭರವಸೆ ನೀಡಿ, ಈಗ ತಮ್ಮ ಮಗನನ್ನು ಬೆಳೆಸುತ್ತಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಯೂ-ಟರ್ನ್​ ತೆಗೆದುಕೊಂಡಿದ್ದಾರೆ ಎಂದು ಟೀಕಿಸಿದರು.

ಇತ್ತೀಚೆಗೆ ನಾಯ್ಡು ಅವರು, ತಾವು ಮೋದಿಯವರಿಗಿಂತ ದೊಡ್ಡವರು. ಆದರೂ ನಾನು ಅವರನ್ನು ಸರ್​ ಎಂದು ಸಂಬೋಧಿಸುತ್ತೇನೆ. ಅವರ ಅಹಂಕಾರ ತೃಪ್ತಿಗಾಗಿ ಇದನ್ನು ಮಾಡುತ್ತೇನೆ ಎಂದಿದ್ದರು. ಈ ಹೇಳಿಕೆಗೆ ತಿರುಗೇತು ನೀಡಿದ ಮೋದಿ, ಹೌದು ಚಂದ್ರಬಾಬು ನಾಯ್ಡು ಅವರು ಹಿರಿಯರು. ಪಕ್ಷ ಬದಲಿಸುವಲ್ಲಿ, ಅವರ ಮಾವ ಎನ್​.ಟಿ.ರಾಮರಾವ್​ಗೆ ನಂಬಿಕೆ ದ್ರೋಹ ಮಾಡುವಲ್ಲಿ ಈಗಾಗಲೇ ಹಿರಿತನ ತೋರಿದ್ದಾರೆ. ಹಾಗೇ ತಮಗೆ ಬೇಕಾದಾಗ ಒಬ್ಬರನ್ನು ಹೊಗಳುವುದು, ಬೇಡವೆಂದ ಮರುಕ್ಷಣವೇ ಅವರನ್ನು ಕಡೆಗಣಿಸುವಲ್ಲಿ ಕೂಡ ಹಿರಿಯರು ಎಂದು ವ್ಯಂಗ್ಯವಾಡಿದರು.

ಚಂದ್ರಬಾಬು ನಾಯ್ಡು ಅವರು ಶ್ರೀಮಂತ ರಾಜಕಾರಣಿ. ಅಪ್ಪ-ಮಗನ ಸರ್ಕಾರಕ್ಕೆ ಕ್ಷಣಗಣನೆ ಶುರುವಾಗಿದ್ದು ಬರುವ ಚುನಾವಣೆಯಲ್ಲಿ ಸೋಲು ಖಚಿತ ಎಂದು ಹೇಳಿದರು.

ನರೇಂದ್ರ ಮೋದಿಯವರು ಆಂಧ್ರಪ್ರದೇಶದ ಗುಂಟೂರಿನಲ್ಲಿ ಕೃಷ್ಣಪಟ್ಟಣಂ ಭಾರತ್​ ಪೆಟ್ರೋಲಿಯಂ ಕಾರ್ಪೋರೇಷನ್​ ಲಿಮಿಟೆಡ್​(ಬಿಪಿಸಿಎಲ್​)ಗೆ ಶಂಕುಸ್ಥಾಪನೆ ನೆರವೇರಿಸಿದರು.

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಶಿಷ್ಟಾಚಾರಕ್ಕೂ ಮೋದಿಯವರನ್ನು ಸ್ವಾಗತಿಸಲು ಏರ್​ಪೋರ್ಟ್​ಗೆ ಹೋಗಲಿಲ್ಲ. ರಾಜ್ಯಪಾಲ ಇಸಿಎಲ್​ ನರಸಿಂಹನ್​ ಅವರು ವಿಜಯವಾಡದ ಏರ್​ಪೋರ್ಟ್​ಗೆ ತೆರಳಿ ಮೋದಿಯವರನ್ನು ಸ್ವಾಗತಿಸಿದರು.

ಪ್ರಧಾನಿ ಮೋದಿ ಆಂಧ್ರ ಭೇಟಿ ಕುರಿತು ಮಾತನಾಡಿದ್ದ ಚಂದ್ರಬಾಬು ನಾಯ್ಡು, ಒಂದೊಮ್ಮೆ ಮೋದಿಯವರು ನಮ್ಮ ರಾಜ್ಯಕ್ಕೆ ಆಗಮಿಸಿದರೆ ಅದು ಬ್ಲ್ಯಾಕ್​ ಡೇ ಆಗಲಿದೆ. ನಮ್ಮ ರಾಜ್ಯದ ಮಣ್ಣು ಅಪವಿತ್ರಗೊಳ್ಳಲಿದೆ ಎಂದಿದ್ದರು.

Prime Minister Narendra Modi,Campaign,Andhra Pradesh,N Chandrababu Naidu

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ