ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ: ರಾಫೇಲ್ ಯುದ್ಧ ವಿಮಾನ ಒಪ್ಪಂದ ಕುರಿತ ಆರೋಪ, ಮಹಾಘಟಬಂಧನ್, ಹಣದುಬ್ಬರ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಲೋಕಸಭೆಯಲ್ಲಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಮುಖವಾಗಿ ರಾಫೇಲ್ ಯುದ್ಧ ವಿಮಾನ ಕುರಿತ ಕಾಂಗ್ರೆಸ್ ಆರೋಪ ಕುರಿತು ಪ್ರಧಾನಿ ಮೊದಲ ಬಾರಿಗೆ ಮೌನ ಮುರಿದಿದ್ದು ವಿಶೇಷವಾಗಿತ್ತು.

ಲೋಕಸಭೆಯಲ್ಲಿ ಸುದೀರ್ಘ ಭಾಷಣ ಮಾಡಿದ ಪ್ರಧಾನಿ ನರೆಂದ್ರ ಮೋದಿ, ಕಾಂಗ್ರೆಸ್ ಗೆ ದೇಶದ ಸೇನೆ ಬಲಗೊಳ್ಳುವುದಾಗಲೀ, ದೇಶದ ಭದ್ರತೆಯಾಗಲಿ ಬೇಕಿಲ್ಲ. ದುರುದ್ದೇಶ ಪೂರಿತವಾಗಿ ಕಾಂಗ್ರೆಸ್ ರಾಫೇಲ್ ಒಪ್ಪಂದವನ್ನು ರದ್ದುಪಡಿಸುವಂತೆ ಒತ್ತಾಯಿಸುತ್ತಿದೆ ಎಂದು ಗುಡುಗಿದರು.

ಕಾಂಗ್ರೆಸ್‌ಗೆ ದೇಶದ ಸಶಸ್ತ್ರ ಪಡೆಗಳು ಬಲಗೊಳ್ಳುವುದು ಬೇಕಿಲ್ಲ. ಭದ್ರತಾ ಸಲಕರಣೆಗಳು ಸಮರ್ಥವಾಗಿರುವುದು ಬೇಕಿಲ್ಲ. ಕಾಂಗ್ರೆಸ್‌ ಅವಧಿಯಲ್ಲಿ ಪ್ರತಿಯೊಂದು ಒಪ್ಪಂದಕ್ಕೂ ಒಬ್ಬ ಮಧ್ಯವರ್ತಿಯಿರುತ್ತಿದ್ದ. ಭದ್ರತೆ ವಿಚಾರದಲ್ಲಿ ನಮ್ಮ ನೆರೆಹೊರೆಯ ರಾಷ್ಟ್ರಗಳೆಲ್ಲ ಅತಿ ಚುರುಕಿನ ಕ್ರಮ ಕೈಗೊಂಡಿವೆ. ತಮ್ಮ ಯುದ್ಧ ಸಾಧನಗಳನ್ನು ಸುಸ್ಥಿರವಾಗಿಟ್ಟುಕೊಳ್ಳಲು ಮುತುವರ್ಜಿ ವಹಿಸಿವೆ. ಆದರೆ ಈ ವಿಷಯದಲ್ಲಿ ನಾವೇಕೆ ಹಿಂದೆ ಬಿದ್ದಿದ್ದೇವೆ? ಈ ವಿಷಯದಲ್ಲಿ ಇದುವರೆಗಿನದ್ದು ಕ್ರಿಮಿನಲ್‌ ಉದಾಸೀನ. ಬಲಿಷ್ಟ ಭಾರತೀಯ ವಾಯು ಪಡೆ ಇರುವುದು ಕಾಂಗ್ರೆಸ್‌ಗೆ ಬೇಕಿರಲಿಲ್ಲ ಎಂದು ಆರೋಪಿಸದರು.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಈಗಾಗಲೇ ರಾಫೇಲ್ ಆರೋಪಕ್ಕೆ ಸಂಬಂಧಿಸಿದಂತೆ ವಿಪಕ್ಷಗಳಿಗೆ ಉತ್ತರಿಸಿದ್ದಾರೆ. ಒಪ್ಪಂದದ ಪ್ರಕ್ರಿಯೆಗಳನ್ನೆಲ್ಲ ಸುಪ್ರೀಂ ಕೋರ್ಟ್​ ಅಧ್ಯಯನ ಮಾಡಿದೆ. ಆದರೂ, ನಮ್ಮ ಸೇನೆಯನ್ನು ಬಲಪಡಿಸುವ ಉದ್ದೇಶವಿಲ್ಲದ ಕಾಂಗ್ರೆಸ್, ​ ಒಪ್ಪಂದಕ್ಕೆ ವಿರೋಧಿಸುತ್ತಿದೆ. ನಾನು ಕಾಂಗ್ರೆಸ್​ನ ಮೇಲೆ ಗಂಭೀರ ಆರೋಪ ಮಾಡುತ್ತಿದ್ದೇನೆ. ಯಾರ ಹಿತಕ್ಕಾಗಿ ನೀವು ಈ ಒಪ್ಪಂದ ರದ್ದು ಮಾಡಲು ಹವಣಿಸುತ್ತಿದ್ದೀರಿ. ಯಾವ ಕಂಪನಿಗಾಗಿ ನೀವು ಈ ಆಟ ಆಡುತ್ತಿದ್ದೀರಿ. ನೀವು ಈ ದೇಶದ ಸೇನೆಯನ್ನು 30 ವರ್ಷಗಳಿಂದ ನಿಶ್ಯಸ್ತ್ರಗೊಳಿಸಿದ್ದಿರಿ ಎಂದು ಆರೋಪಿಸಿದರು.

ಕಾಂಗ್ರೆಸ್​ನಲ್ಲಿರುವ ನನ್ನ ಸ್ನೇಹಿತರು ಎರಡು ಯುಗಗಳನ್ನು ನೋಡಿದ್ದಾರೆ. ಒಂದು BC-Before Congress, ಮತ್ತೊಂದು AD-After Dynasty. BC ಯಲ್ಲಿ ಏನೂ ಆಗಿರಲಿಲ್ಲ. ಆದರೆ, ADಯಲ್ಲಿ ಎಲ್ಲವೂ ಆಗುತ್ತಿರುವುದನ್ನು ಆ ನನ್ನ ಸ್ನೇಹಿತರು ನೋಡುತ್ತಿದ್ದಾರೆ ಎಂದರು.

ಪ್ರಧಾನಿ ಈ ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ವಿಪಕ್ಷಗಳು ಆರೋಪಿಸುತ್ತಾರೆ. ಒಂದು ಮಾತಿದೆ, ಕಳ್ಳ ಕಾವಲುಗಾರನನ್ನು ನಿಂದಿಸಿದ ಎಂದು. ಆದರೆ, ನಾವೆಲ್ಲ ಒಂದು ವಿಚಾರವನ್ನು ಅರಿಯಬೇಕು. ಈ ದೇಶದಲ್ಲಿ ತುರ್ತು ಪರಿಸ್ಥಿಯನ್ನು ಹೇರಿದ್ದು ಕಾಂಗ್ರೆಸ್​. ಆದರೂ, ಮೋದಿ ಈ ದೇಶವನ್ನು ಹಾಳುಗೆಡವಿದರು ಎಂದು ಆರೋಪಿಸಲಾಗುತ್ತದೆ ಎಂಬುದು ನೆನಪಿನಲ್ಲಿರಲಿ ಎಂದು ಛೇಡಿಸಿದರು.

ಯುಪಿಎ ಅವಧಿಯಲ್ಲಿ ದೂರವಾಣಿ ಬ್ಯಾಂಕಿಂಗ್‌ ಅವರ ನಾಯಕರ ಸ್ನೇಹಿತರುಗಳಿಗೆ ಅದ್ಭುತಗಳನ್ನೇ ಸೃಷ್ಟಿಸಿಕೊಟ್ಟಿತ್ತು. ತಮಗೆ ಬೇಕಾದವರ ಪರ ವಸೂಲಿಬಾಜಿಗೆ ಒಲವು ತೋರಿಸುತ್ತ ಬಂದಿದ್ದರಿಂದ ನಮ್ಮ ಬ್ಯಾಂಕಿಂಗ್‌ ವ್ಯವಸ್ಥೆ ಅನೇಕ ಸಮಸ್ಯೆಗಳನ್ನು ಎದುರಿಸಿತು.

ಕಾಂಗ್ರೆಸ್‌ ಸ್ನೇಹಿತರು ತಮ್ಮ ಕೆಲಸಗಳನ್ನು ಹೊರಗುತ್ತಿಗೆ ನೀಡುತ್ತಿದ್ದರು. ಲೂಟಿಕೋರರಿಗೆ ಅನುವು ಮಾಡಿಕೊಡುತ್ತಿದ್ದರು. 9,000 ಕೋಟಿ ರೂ. ಲಫಟಾಯಿಸಲಾಗಿದೆ ಎಂದು ಅವರು ಬಾಯಿ ಬಡಿದುಕೊಳ್ಳಲಾಗುತ್ತಿದೆ. ಆದರೆ ಮೋದಿ 13,000 ಕೋಟಿ ರೂ. ವಾಪಸ್‌ ತರುತ್ತಿದ್ದಾರೆ. ದೇಶಭ್ರಷ್ಟರಲ್ಲಿ ಈಗ ನಡುಕ ಸೃಷ್ಟಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಕಳೆದ 55 ವರ್ಷಗಳಲ್ಲಿ ಶೌಚಾಲಯಗಳ ನಿರ್ಮಾಣ ಶೇ 38ರಷ್ಟು, ಆ ಪ್ರಮಾಣ 55 ತಿಂಗಳಲ್ಲಿ ಶೇ 98ರಷ್ಟಾಗಿದೆ. 55 ವರ್ಷಗಳಲ್ಲಿ 12 ಕೋಟಿ ಅನಿಲ ಸಂಪರ್ಕವಿತ್ತು. ಕೇವಲ 55 ತಿಂಗಳಲ್ಲಿ 13 ಕೋಟಿ ಅನಿಲ ಸಂಪರ್ಕ ನೀಡಲಾಗಿದೆ. ಕಳೆದ ಐದು ವರ್ಷಗಳಲ್ಲಿ ನಾವು ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸಿದ್ದೇವೆ ಎಂದರು.
PM Modi,Lok Sabha,Congress Doesn’t Want Armed Forces To Be Strong

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ