![belagavi-bsy](https://kannada.vartamitra.com/wp-content/uploads/2018/12/belagavi-bsy-650x381.jpg)
ಬೆಂಗಳೂರು, ಫೆ.7-ವಿಧಾನಸಭೆಯ ಪಕ್ಷದ ಕೊಠಡಿಯಲ್ಲಿ ಇಂದು ನಡೆದ ಶಾಸಕಾಂಗ ಸಭೆ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಅವರು, ದೋಸ್ತಿ ಸರ್ಕಾರ ಪತನಕ್ಕೆ ದಿನಗಣನೆ ಆರಂಭವಾಗಿದೆ. ನಮ್ಮ ಶಾಸಕರು ಆಮಿಷಗಳಿಗೆ ಬಲಿಯಾಗದೆ ಒಗ್ಗಟ್ಟು ಪ್ರದರ್ಶಿಸಬೇಕು.ನೀವೆಲ್ಲರೂ ಆಶಾಭಾವನೆ ಇಟ್ಟುಕೊಳ್ಳಬೇಕೆಂದು ಸೂಚಿಸಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಈ ಸರ್ಕಾರ ಬಜೆಟ್ ಮಂಡನೆಗೂ ಮುನ್ನವೇ ಪತನಗೊಂಡರೂ ಅಚ್ಚರಿಯಿಲ್ಲ. ನಮ್ಮ ಪಕ್ಷದ ಕೆಲವು ಶಾಸಕರನ್ನು ಸೆಳೆಯಲು ಸರ್ಕಾರ ಆಮಿಷ ಒಡ್ಡಿರುವುದು ನನ್ನ ಗಮನಕ್ಕೆ ಬಂದಿದೆ.ನಿಮ್ಮ ಭವಿಷ್ಯದ ಹಿತದೃಷ್ಟಿಯಿಂದ ಕೆಟ್ಟ ನಿರ್ಧಾರಗಳನ್ನು ಕೈಗೊಳ್ಳಬೇಡಿ.ಪಕ್ಷ ನಿಮಗೆ ಎಲ್ಲಾ ರೀತಿಯಲ್ಲೂ ಬೆಂಬಲವಾಗಿ ನಿಲ್ಲುತ್ತದೆ.ಈಗ ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿಯಬಾರದು ಎಂದು ಮನವಿ ಮಾಡಿದ್ದಾರೆ.
ಸರ್ಕಾರದಲ್ಲಿ ನಡೆಯುತ್ತಿರುವ ಪ್ರತಿಯೊಂದು ಬೆಳವಣಿಗೆಗಳು ನಮಗೆ ಪೂರಕವಾಗಿ ಪರಿಣಮಿಸಿವೆ. ಯಾವ ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.ಅದನ್ನು ನಿರ್ವಹಿಸುವವರು ನೋಡಿಕೊಳ್ಳುತ್ತಾರೆ.ಕಲಾಪಕ್ಕೆ ಕಡ್ಡಾಯವಾಗಿ ಹಾಜರಾಗಿ ಒಗ್ಗಟ್ಟು ಪ್ರದರ್ಶಿಸಬೇಕು.ಇದು ಪಕ್ಷದ ವರಿಷ್ಠರ ಸೂಚನೆಯೂ ಆಗಿದೆ ಎಂದಿದ್ದಾರೆ.
ನಿನ್ನೆ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ವೇಳೆಯೇ ಸರ್ಕಾರದ ಬಂಡವಾಳ ಬಯಲಾಗಿದೆ.ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲೆ ಯಾರೊಬ್ಬರೂ ವಿಶ್ವಾಸ ಇಟ್ಟುಕೊಂಡಿಲ್ಲ. ಅವರಲ್ಲೇ ಬಡಿದಾಡಿಕೊಂಡು ಸರ್ಕಾರವನ್ನು ಕೆಡವುತ್ತಾರೆ.ಎಲ್ಲವನ್ನೂ ತಾಳ್ಮೆಯಿಂದ ಕಾದು ನೋಡಿ ಎಂದು ಬಿಎಸ್‍ವೈ ತಿಳಿಸಿದ್ದಾರೆ ಎನ್ನಲಾಗಿದೆ.