ಮೈತ್ರಿ ಸರ್ಕಾರ ಉರುಳಲು ಬಿಡಲ್ಲ ಎಂದ ದೊಡ್ಡಗೌಡರಿಗೆ ಧರ್ಮಸಂಕಟ..!

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರ ಉರುಳಲ್ಲ ಬಿಡಲ್ಲ ಎಂದು ಹೇಳಿದ್ದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಧರ್ಮ ಸಂಕಟದಲ್ಲಿ ಸಿಲುಕಿಕೊಂಡ್ರಾ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

ಲೋಕಸಭಾ ಚುನಾವಣೆಗೂ ಮೈತ್ರಿ ಘೋಷಿಸಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಕ್ಷೇತ್ರಗಳನ್ನು ಹಂಚಿಕೊಂಡಿದ್ದು, ಅಧಿಕೃತ ಪ್ರಕಟನೆ ಹೊರಬೀಳಬೇಕಿದೆ. ಹಾಸನ ಲೋಕಸಭಾ ಕ್ಷೇತ್ರವನ್ನು ದೇವೇಗೌಡರು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟಿದ್ದಾರೆ. ಹಾಸನ ಕ್ಷೇತ್ರವನ್ನು ದಳಕ್ಕೆ ಬಿಟ್ಟುಕೊಡಲು ಕೈ ನಾಯಕರು ಒಪ್ಪಿಗೆ ಸೂಚಿಸಿ ಷರತ್ತು ಹಾಕಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ದೇವೇಗೌಡರು ಹಾಸನದಿಂದ ಸ್ಪರ್ಧೆ ಮಾಡಿದ್ರೆ ಕಾಂಗ್ರೆಸ್ ಅಭ್ಯರ್ಥಿಗಳ ಸ್ಪರ್ಧೆ ಮಾಡಲ್ಲ. ಒಂದು ವೇಳೆ ಪ್ರಜ್ವಲ್ ರೇವಣ್ಣ ಕಣಕ್ಕಿಳಿದ್ರೆ ಕಾಂಗ್ರೆಸ್ ಅಭ್ಯರ್ಥಿಯೂ ಕಣಕ್ಕಿಳಿಯಲಿದ್ದಾರೆ ಎಂದು ಕೈ ನಾಯಕರು ಷರತ್ತು ಹಾಕಿದ್ದಾರಂತೆ. ಮೊಮ್ಮಗನ ರಾಜಕೀಯ ಭವಿಷ್ಯ ರೂಪಿಸಲು ಮುಂದಾಗಿದ್ದ ದೊಡ್ಡಗೌಡರು ಧರ್ಮ ಸಂಕಟದಲ್ಲಿ ಸಿಲುಕಿದಂತಾಗಿದೆ ಎಂದು ಪಕ್ಷದಲ್ಲಿಯೆ ಚರ್ಚೆಗಳು ನಡೆದಿವೆ.

ಕೆಲವು ದಿನಗಳ ಹಿಂದೆ ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಹೇಳಿಕೆ ನೀಡಿದ ಮೇಲೆ ದೊಡ್ಡಗೌಡರು ಮೈತ್ರಿ ಸರ್ಕಾರ ಉರುಳಲು ಬಿಡಲ್ಲ ಎಂದು ಹೇಳಿದ್ದರು. ಇದೀಗ ದೊಡ್ಡಗೌಡರೇ ಧರ್ಮ ಸಂಕಟದಲ್ಲಿ ಸಿಲುಕಿದಂತಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ