ಶೇ.10 ಮೀಸಲಾತಿಯಿಂದ ಹಾಲಿಯಿರುವ ಮೀಸಲು ಪದ್ಧತಿಗೆ ಧಕ್ಕೆಯಿಲ್ಲ: ಪ್ರಧಾನಿ ಮೋದಿ

ಚೆನ್ನೈ: ಸಾಮಾನ್ಯ ವರ್ಗದ ಬಡವರಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಶೇ.10 ಮೀಸಲಾತಿಯಿಂದ ಹಾಲಿಯಿರುವ ಮೀಸಲು ಪದ್ಧತಿಗೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.

ತಮಿಳುನಾಡಿನ ಮಧುರೈನಲ್ಲಿ ಸ್ಥಾಪನೆಯಾಗುತ್ತಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌)ಗೆ ಪ್ರಧಾನಿ ನರೇಂದ್ರ ಮೋದಿ ಅಡಿಗಲ್ಲು ಹಾಕಿದರು. ಈ ವೇಳೆ ಮಾತನಾಡಿದ ಅವರು, ಆರ್ಥಿಕ ದುರ್ಬಲರಿಗೆ ಜಾರಿಗೊಳಿಸಿರುವ ಶೇ.10 ಮೀಸಲು ನೀತಿ ಕುರಿತು ತಮಿಳುನಾಡಿನಲ್ಲಿ ಕೆಲವರು ಅನುಮಾನ ಮತ್ತು ಅಪನಂಬಿಕೆಯ ವಾತಾವರಣ ಸೃಷ್ಟಿಸುತ್ತಿದ್ದಾರೆ. ಇದು ತಪ್ಪು ಶೇ.10 ಮೀಸಲಾತಿಯಿಂದ ಹಾಲಿಯಿರುವ ಮೀಸಲು ಪದ್ಧತಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದರು.

ಶಿಕ್ಷಣ ಮತ್ತು ಉದ್ಯೋಗದಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಆರ್ಥಿಕ ದುರ್ಬಲರಿಗೂ ಮೀಸಲು ನೀಡಲಾಗುತ್ತಿದೆ. ದಲಿತರು, ಬುಡಕಟ್ಟು ಜನರ ಹಿತಾಸಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ಈ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ ಎಂದರು.

ಪ್ರತಿಪಕ್ಷಗಳ ಮಹಾಘಟಬಂಧನದ ವಿರುದ್ಧ ಮತ್ತೊಮ್ಮೆ ಹರಿಹಾಯ್ದ ಪ್ರಧಾನಿ ಮೋದಿ, ದೇಶದ ಕಾವಲುಗಾರನನ್ನು ಕಿತ್ತೊಗೆಯಲು ತಮ್ಮ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಜನರು ಒಂದಾಗುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಇದೇ ವೇಳೆ ಮೋದಿ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸಲಿರುವ 12 ಪಾಸ್​ಪೋಟ್​ರ್ ಸೇವಾ ಕೇಂದ್ರಗಳಿಗೂ ಚಾಲನೆ ನೀಡಿದರು.

PM Narendra Modi, Visits Tamil Nadu,lays foundation stone for AIIMS

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ