ಶಾಸಕರನ್ನು ಬಿಜೆಪಿ ದೆಹಲಿಯಲ್ಲೇ ಇನ್ನೂ ಒಂದು ವಾರ ಬೇಕಾದರೂ ಇಟ್ಟುಕೊಳ್ಳಲಿ ; ಎಚ್​.ಡಿ. ರೇವಣ್ಣ ವ್ಯಂಗ್ಯ

ಹಾಸನಸರ್ಕಾರನ್ನು ಉರುಳಿಸಲು ಬಿಜೆಪಿ ಏನೇ ಮಾಡಿದರೂ ನಮಗೆ ತೊಂದರೆಯಾಗುವುದಿಲ್ಲ. ಸರ್ಕಾರ ಸುಭದ್ರವಾಗಿದೆ. ಇನ್ನೂ ಒಂದು ವಾರ ಬೇಕಿದ್ದರೂ ಶಾಸಕರನ್ನು ದೆಹಲಿಯಲ್ಲೇ ಇಟ್ಟುಕೊಳ್ಳಲಿ, ಶಾಸಕರಿಗೆ ಇನ್ನೂ ಹೆಚ್ಚು ಸೌಲಭ್ಯ ನೀಡಲಿ ಎಂದು ಸಚಿವ ಎಚ್​.ಡಿ. ರೇವಣ್ಣ ವ್ಯಂಗ್ಯವಾಡಿದ್ದಾರೆ.

ಯಡಿಯೂರಪ್ಪ ರಾಜ್ಯದ ಜನರ ಹಿತ ಕಾಪಾಡಬೇಕು. ಅವರು ಇದೇರೀತಿ ಆಟವಾಡುತ್ತಾ ಇದ್ದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನರು ಸರಿಯಾದ ಪಾಠ ಕಲಿಸುತ್ತಾರೆ. ಮಾನ ಮರ್ಯಾದೆ ಇದ್ದರೆ ಬಿಜೆಪಿ ಬರವನ್ನು ನೀಗಿಸುವ ಪ್ರಯತ್ನ ಮಾಡಲಿ. ಸುಮ್ಮನೆ ಹೋಟೆಲ್​ನಲ್ಲಿ ಕುಳಿತು ಮಜಾ ಮಾಡುವುದೇ ದೊಡ್ಡ ಸಾಧನೆಯಲ್ಲ ಎಂದಿದ್ದಾರೆ.

ಸಿಎಂ ಕುಮಾರಸ್ವಾಮಿ 4 ಬಾರಿ ಕೇಂದ್ರ ಸರ್ಕಾರಕ್ಕೆ ಬರಗಾಲದ ಪರಿಸ್ಥಿತಿಯ ಬಗ್ಗೆ ಪತ್ರ ಬರೆದಿದ್ದಾರೆ. ಆದರೆ, ಆ ಕಡೆಯಿಂದ ಯಾವುದೇ ಸ್ಪಂದನೆಯಿಲ್ಲ ಎಂದು ಆಕ್ರೋಶ ಹೊರಹಾಕಿರುವ ಎಚ್​.ಡಿ. ರೇವಣ್ಣ, ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ ಹಾಸನದಿಂದ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಎಚ್​.ಡಿ. ರೇವಣ್ಣ, ಶೋಭಾ ಕರಂದ್ಲಾಜೆ ಹಾಸನಕ್ಕೆ ಬಂದರೆ ಅವರಿಗೆ ಸ್ವಾಗತ. ಶೋಭಕ್ಕನವರನ್ನು ಯಡಿಯೂರಪ್ಪ ಚೆನ್ನಾಗಿ ನೋಡಿಕೊಳ್ಳಲಿ. ಶೋಭಕ್ಕನಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಕೊಡಿಸಲಿ, ಶೋಭಕ್ಕ ಮಹಿಳಾ ಮೀಸಲಾತಿ ಬಗ್ಗೆ ಹೋರಾಡಲಿ ಎಂದು ವ್ಯಂಗ್ಯವಾಡಿದ್ದಾರೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ