ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರೈತರು ಭತ್ತವನ್ನು ನೇರವಾಗಿ ರೈಸ್ ಮಿಲ್ ಮಾಲೀಕರಿಗೆ ನೀಡಬೇಕು

ಬೆಂಗಳೂರು, ಜ.9-ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಬೆಂಬಲ ಬೆಲೆ ಯೋಜನೆಯಡಿ ಅಕ್ಕಿ ಮಿಲ್‍ಗಳು ಭತ್ತ ಖರೀದಿಸಲು ಇಡಬೇಕಾದ ಠೇವಣಿಗೆ ಪರ್ಯಾಯ ಉಪಾಯಗಳನ್ನು ರೂಪಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿಂದು ನಡೆದ ಜನಪ್ರತಿನಿಧಿಗಳು, ಅಕ್ಕಿ ಗಿರಣಿ ಮಾಲೀಕರು ಹಾಗೂ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ಸೂಚನೆ ನೀಡಿದ್ದಾರೆ.

ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸುವ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬದಲಿಸಿದೆ. ಇದರಿಂದ ನೇರವಾಗಿ ರೈತರು ರೈಸ್‍ಮಿಲ್‍ಗಳ ಮಾಲೀಕರಿಗೆ ಭತ್ತ ನೀಡಬೇಕಾಗುತ್ತದೆ. ಭತ್ತ ಪಡೆದ ಅಕ್ಕಿ ಗಿರಣಿಗಳು ಅಕ್ಕಿಯನ್ನು ತಯಾರಿಸಿ ಆಹಾರ ನಿಗಮದ ಮೂಲಕ ಪೂರೈಸಬೇಕಾಗಿದೆ. ಪ್ರಕ್ರಿಯೆಯಲ್ಲಿ  ದಾಸ್ತಾನು ಮಾಡುವಂತಹ ರೈತರ ಭತ್ತಕ್ಕೆ ಭದ್ರತೆಯಾಗಿ ಮಿಲ್ ಮಾಲೀಕರು ಠೇವಣಿ ಇಡಬೇಕೆಂದು ಸೂಚಿಸಲಾಗಿದೆ. ಆದರೆ ಮಿಲ್ ಮಾಲೀಕರು ಆರ್ಥಿಕವಾಗಿ ಸಂಕಷ್ಟದಲ್ಲಿರುವುದರಿಂದ ಹೆಚ್ಚಿನ ಮಿಲ್ ಮಾಲೀಕರು ಭತ್ತ ಖರೀದಿಗಾಗಿ ತಮ್ಮ ಮಿಲ್‍ಗಳನ್ನು  ನೋಂದಾಯಿಸಲು ಅಸಹಾಯಕರಾಗಿರುವುದನ್ನು ಸಭೆಯಲ್ಲಿ ಪ್ರಸ್ತಾಪಿಸಿದಾಗ ಮುಖ್ಯಮಂತ್ರಿ  ಈ ಸೂಚನೆ ನೀಡಿದ್ದಾರೆ.

ಅಲ್ಲದೆ, ಮಿಲ್ ಮಾಲೀಕರು ಠೇವಣಿಗೆ ಬದಲಾಗಿ ಆಸ್ತಿ ಅಡಮಾನ, ಪೊಸ್ಟ್ ಡೇಟೇಡ್ ಚೆಕ್ ಪಡೆಯುವುದು ಸೇರಿದಂತೆ ಪರ್ಯಾಯ ಮಾರ್ಗೋಪಾಯ ರೂಪಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ  ಅಧಿಕಾರಿಗಳಿಗೆ ಸೂಚಿಸಿದರು. ಜೊತೆ ಅಕ್ಕಿ ಮಿಲ್ ಮಾಲೀಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕುರಿತ ಪ್ರಸ್ತಾವನೆ ಸಲ್ಲಿಸುವಂತೆಯೂ ಸೂಚಿಸಿದರು.

ಸಭೆಯಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ಸಿ.ಎನ್.ಬಾಲಕೃಷ್ಣ, ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಸೇರಿದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ