ವಿಧಾನಸೌಧ ಗೇಟ್ ಬಳಿ 14 ಲಕ್ಷ ರೂ. ನಗದು ಜಪ್ತಿ: ಆರೋಪಿ ಟೈಪಿಸ್ಟ್ ಮೋಹನ್ ವಿಚಾರಣೆ

ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ವೆಸ್ಟ್ ಗೇಟ್​ನಲ್ಲಿ ಪೊಲೀಸರು ಸಿಬ್ಬಂದಿವೋರ್ವನಿಂದ ಹಣ ಜಪ್ತಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಡರಾತ್ರಿವರೆಗೂ ಆರೋಪಿ ಟೈಪಿಸ್ಟ್ ಮೋಹನ್ ವಿಚಾರಣೆ ನಡೆಸಿದರು.

ಹಣ ಯಾರಾದ್ದು, ಎಲ್ಲಿಂದ ಬಂತು? ಎಂಬುದರ ಕುರಿತು ತೀವ್ರ ವಿಚಾರಣೆ  ನಡೆಸಿದರು. ಅಷ್ಟು ಮಾತ್ರವಲ್ಲದೇ ಈಗಾಗಲೇ ಮೋಹನ್ ವಿರುದ್ದ ಸಿಆರ್ ಪಿಸಿ 41(D), 102 ಐಪಿಸಿ ಸೆಕ್ಷನ್ ಅಡಿ ಕೇಸ್

ದಾಖಲಾಗಿದ್ದು, ಸದ್ಯ ಯಾರನ್ನೂ ಬಂಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ.

ವಿಚಾರಣೆ ಸಂಪೂರ್ಣವಾದ ಬಳಿಕ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬಹುದು ಎನ್ನಲಾಗಿದೆ.ಈ ಹಿನ್ನೆಲೆಯಲ್ಲಿ ಇವತ್ತು ವಿಚಾರಣೆಗೆ ಹಾಜರಾಗುವಂತೆ  ಪೊಲೀಸರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿ ಮೋಹನ್ ಸರ್ಕಾರಿ ನೌಕರನಲ್ಲ, ಕೆಲವು ಗುತ್ತಿಗೆದಾರರ ಜೊತೆ ನಂಟಿರುವುದು ವಿಚಾರಣೆ ವೇಳೆ ತಿಳಿದು ಬಂದಿದ್ದು, ವಿಧಾನಸೌದದಲ್ಲಿ ಯಾರೊಂದಿಗೆ ಸಂಪರ್ಕದಲ್ಲಿದ್ದ ಎನ್ನುವುದನ್ನ ಕೂಡ ಪೊಲೀಸರು ಮಾಹಿತಿ ಪಡೆದಿದ್ದಾರೆ. ಆರೋಪಿ ಯಾರಿಗೆ ಹಣ ತೆಗೆದುಕೊಂಡು ಹೋಗುತ್ತಿದ್ದ ಎನ್ನುವುದರ ಬಗ್ಗೆ ಗೊಂದಲವಿದೆ. ಈ ಹಿನ್ನೆಲೆಯಲ್ಲಿ ಇಂದು  ವಿಚಾರಣೆ ಮುಂದುವರೆಯಲಿದೆ.

ಏನಿದು ಪ್ರಕರಣ
ನಿನ್ನೆ ವಿಧಾನಸೌಧ ವೆಸ್ಟ್ ಗೇಟ್​ನಲ್ಲಿ  ವ್ಯಕ್ತಿಯೊಬ್ಬರ ಬಳಿ ದಾಖಲೆ ಇಲ್ಲದ ಬರೋಬ್ಬರಿ 14 ಲಕ್ಷ ರೂ. ಜಪ್ತಿಯಾಗಿತ್ತು. ಆತನನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ಸಚಿವರೊಬ್ಬರಿಗೆ ನೀಡಲು ತಂದಿದ್ದ ಹಣ ಎಂದು ನಿನ್ನೆ ಹೇಳಲಾಗುತ್ತಿತ್ತು. ಆದರೆ ಅದರ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿರಲಿಲ್ಲ, ಇದೀಗ ತನಿಖೆ ಮುಂದುವರೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ