ಹೊಸ ವರ್ಷಾಚರಣೆ ಹಿನ್ನಲೆ,ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಾಗರೂಕತೆಯಿಂದ ಆಚರಿಸುವ ಸಲುವಾಗಿ ರ್ಯಾಲಿ ನಡೆಸಿದ ಪೊಲೀಸರು

ಮಹದೇವಪುರ, ಡಿ.31- 2019ರ ಹೊಸ ವರ್ಷಾಚರಣೆಯನ್ನು ಸಡಗರ ಸಂಭ್ರಮದಿಂದ ಬರಮಾಡಿಕೊಳ್ಳಲು ಎಲ್ಲೆಡೆ ಭರದ ಸಿದ್ಧತೆಗಳು ನಡೆದಿದ್ದು, ಈ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಾಗರೂಕತೆಯಿಂದ ಆಚರಿಸುವ ಸಲುವಾಗಿ ವೈಟ್‍ಫೀಲ್ಡ್ ವಿಭಾಗದ ಪೊಲೀಸರು ರ್ಯಾಲಿ ನಡೆಸುವ ಮೂಲಕ ಜನತೆಯಲ್ಲಿ ಧೈರ್ಯ ತುಂಬಿದ್ದಾರೆ.

50 ಹೊಯ್ಸಳ ವಾಹನಗಳು ಹಾಗೂ 50ಕ್ಕೂ ಹೆಚ್ಚು ಬೈಕ್‍ಗಳಲ್ಲಿ ವೈಟ್‍ಫೀಲ್ಡ್ ವಿಭಾಗದ 8 ಪೊಲೀಸ್ ಠಾಣೆಗಳ ಸಿಬ್ಬಂದಿಗಳು ಮಾರತ್ತಹಳ್ಳಿ ರಸ್ತೆಯ ರಾಮಗೊಂಡನಹಳ್ಳಿಯಿಂದ ವೈಟ್‍ಫೀಲ್ಡ್ ಡಿಸಿಪಿ ಕಚೇರಿವರೆಗೆ ರ್ಯಾಲಿ ನಡೆಸುವ ಮೂಲಕ ಸಾರ್ವಜನಿಕರು ಶಾಂತಿಯುತವಾಗಿ ಹೊಸ ವರ್ಷಾಚರಣೆ ಆಚರಿಸಲು ನಾವು ನಿಮ್ಮ ಜೊತೆ ಇರುತ್ತೇವೆಂಬ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ಹೊಸ ವರ್ಷಾಚರಣೆ ವೇಳೆ ಪೊಲೀಸ್ ಸಿಬ್ಬಂದಿಗಳು ರಾತ್ರಿಯಿಡಿ ಕಾರ್ಯ ನಿರ್ವಹಿಸುವುದರಿಂದ ಒಂದು ದಿನ ಮುಂಚಿತವಾಗಿ ಪೊಲೀಸ್ ಸಿಬ್ಬಂದಿಗಳು ಹೊಸ ವರ್ಷಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ದಿವಂಗತ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ರವರ ಭಾವಚಿತ್ರಕ್ಕೆ ನಮನ ಸಲ್ಲಿಸುವ ಮೂಲಕ ಮೌನಾಚರಣೆ ನಡೆಸಿದರು.

ದಕ್ಷ ಅಧಿಕಾರಿಯನ್ನು ಪೊಲೀಸ್ ಇಲಾಖೆ ಕಳೆದುಕೊಂಡಿದ್ದರಿಂದ ಈ ಭಾರಿ ಯಾವುದೇ ಆಡಂಬರವಿಲ್ಲದೆ ಕೇಕ್ ಕಟಿಂಗ್ ಕಾರ್ಯಕ್ರಮವನ್ನು ರದ್ದು ಗೊಳಿಸಿ ಸರಳವಾಗಿ ಪೊಲೀಸ್ ಸಿಬ್ಬಂದಿಗಳು ಕಾರ್ಯಕ್ರಮ ನೆರವೇರಿಸಿದರು.
ರ್ಯಾಲಿಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಚಾಲನೆ ನೀಡಿ, ವೈಟ್ ಪೀಲ್ಡ್ ವಿಭಾಗದ ಪೊಲೀಸರ ಈ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದರು.

ಹೊಸ ವರ್ಷ ಆಚರಣೆಗೆ ಎಲ್ಲಾ ಸಿಬ್ಬಂದಿಗಳು ಕಾರ್ಯದಲ್ಲಿ ಮಗ್ನರಾಗುವುದರಿಂದ ಒಂದು ದಿನ ಮುಂಚಿತಾಗಿ ಜನರಿಗೆ ಧೈರ್ಯ ತುಂಬುವ ರ್ಯಾಲಿ ಹಾಗೂ ಹಿರಿಯ ಅಧಿಕಾರಿ ಮಧುಕರ್ ಶೆಟ್ಟಿ ಅವರ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು ಎಂದು ಹೇಳಿದರು.

ವರ್ಷಾಚರಣೆ ಸಂಭ್ರಮವಿರಲಿ, ಆದರೆ, ಜಾಗೃತೆಯಿರಲಿ ಎಂದು ಮನವಿ ಮಾಡಿದ ಅವರು, ಸಾರ್ವಜನಿಕರೂ ಸಹ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಕೋರಿದರು.

ಡಿಸಿಪಿ ಅಬ್ದುಲ್ ಅಹದ್ ಮಾತನಾಡಿ, ನಮ್ಮ ವ್ಯಾಪ್ತಿಯಲ್ಲಿ 20 ಕಡೆ ನಾಕಾ ಬಂಧಿಗಳನ್ನು ಆಳವಡಿಸಿದ್ದು, ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಪ್ರಕರಣ ದಾಖಲಿಸುವುದರ ಜೊತೆಗೆ ಕ್ರಮ ಬದ್ಧವಾಗಿ ಹೊಸ ವರ್ಷಾಚರಣೆ ಆಚರಿಸಿಕೊಳ್ಳುವವರಿಗೆ ಸಂಪೂರ್ಣ ಭದ್ರತೆ ಕಲ್ಪಿಸುವುದಾಗಿ ತಿಳಿಸಿದರು.
ಕಳೆದ ಹದಿನೈದು ದಿನಗಳಿಂದ ತಯಾರಿ ನಡೆಸಿ ನಲವತ್ತು ಜಾಗಗಳಲ್ಲಿ ಅನುಮತಿ, ಸಿಸಿಟಿವಿ, ಬೌನ್ಸರ್, ಡಾಕ್ಟರ್ ಅಳವಡಿಕೆಯ ಕುರಿತು ಪರಿಶೀಲಿಸಲಾಗಿದೆ ಎಂದು ಹೇಳಿದರು.

ಫ್ರೀ ಪ್ಯಾಕೆಜ್‍ನಿಂದ ಆರೋಗ್ಯ ಹಾನಿ ಮಾಡಿಕೊಳ್ಳದೆ ಸೇಫ್ ಆಗಿ ಮನೆ ಮುಟ್ಟುವ ಬಗ್ಗೆ ತಿಳುವಳಿಕೆ ನೀಡಲಾಯಿತು ಎಂದು ಹೇಳಿದರು.
800 ಪೊಲೀಸ್ ಸಿಬ್ಬಂದಿ, 200 ಹೋಮ್‍ಗಾರ್ಡ್, ಕರ್ನಾಟಕ ಸ್ಟೇಟ್ ರಿಸರ್ವ ಪೊಲೀಸ್ ವಾಹನ , ಟ್ರಾಫಿಕ್ ಸಿಬ್ಬಂದಿ ಸೇರಿದಂತೆ ಒಂದೂವರೆ ಸಾವಿರ ಸಿಬ್ಬಂದಿಯನ್ನು ಹೊಸ ವರ್ಷಾಚರಣೆಗೆ ನೇಮಿಸಲಾಗಿದೆ ಎಂದು ಹೇಳಿದರು.

ವೈಟ್‍ಫೀಲ್ಡ್ ವಿಭಾಗ ವ್ಯಾಪ್ತಿಯ ಎಲ್ಲಾ ಸರ್ಕಲ್ ಇನ್ಸ್‍ಪೆಕ್ಟರ್‍ಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ