ಅನುಮಾನಾಸ್ಪದವಾಗಿ ಮೃತಪಟ್ಟಿರುವ ನವ ವಿವಾಹಿತೆ

ಹಾಸನ,ಡಿ.31- ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವ ವಿವಾಹಿತೆ, ಅನುಮಾನಾಸ್ಪದವಾಗಿ ಮೃತ ಪಟ್ಟಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಕತ್ತರಿಘಟ್ಟ ಗ್ರಾಮದಲ್ಲಿ ನಡೆದಿದೆ.

ಹಾಸನ ತಾಲೂಕಿನ ಹೆರಗು ಗ್ರಾಮದ ಆಶಾ(21)ಮೃತ ದುರ್ದೈವಿ. ಆಶಾಳನ್ನು ಮೂರು ತಿಂಗಳ ಹಿಂದಷ್ಟೇ ಕತ್ತರಿಘಟ್ಟ ಗ್ರಾಮದ ಜೆಸಿಬಿ ಚಾಲಕ ಮಹೇಶ್ ಎಂಬಾತನಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು.ಮದುವೆ ವೇಳೆ ಕೇಳಿದಷ್ಟು ವರದಕ್ಷಿಣೆಯನ್ನೂ ಸಹ ನೀಡಲಾಗಿತ್ತು ಎನ್ನಲಾಗಿದೆ.

ಮದುವೆಯಾದ ದಿನದಿಂದಲೂ ಪತ್ನಿಗೆ ಕಿರುಕುಳ ನೀಡುತ್ತಿದ್ದ ಮಹೇಶ, ಪತ್ನಿ ಬಡಿಸಿದ ಊಟವನ್ನೂ ಮಾಡುತ್ತಿರಲಿಲ್ಲ. ಇದಕ್ಕಾಗಿಯೇ ಅನೇಕ ವೇಳೆ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯತಿ ಸಹ ನಡೆದಿತ್ತು. ಮನೆಯವರೊಂದಿಗೂ ಮೊಬೈಲ್‍ನಲ್ಲಿ ಮಾತನಾಡಿದರೂ ಅನುಮಾನ ಪಡುತ್ತಿದ್ದ ಪತಿಯ ಮನೆಗೆ ಹೋಗುವುದಿಲ್ಲ ಎಂದು ಆಶಾ ಹಠ ಹಿಡಿದಿದ್ದಳು.

ಆದರೆ ಹಂತ ಹಂತವಾಗಿ ಸಂಸಾರ ಸರಿಹೋಗಲಿದೆ ಎಂದು ಮನೆಯವರು ಧೈರ್ಯ ತುಂಬಿ ಆಶಾಳನ್ನು ಗಂಡನ ಮನೆಗೆ ಕಳುಹಿಸಿದ್ದರು.ಆದರೆ ಇಂದು ಬೆಳಗ್ಗೆ ಚನ್ನರಾಯಪಟ್ಟಣ ಬಳಿಯ ಹೇಮಾವತಿ ನಾಲೆಯಲ್ಲಿ ಆಶಾಳ ಶವ ಪತ್ತೆಯಾಗಿದೆ.
ನಿತ್ಯ ಚಿತ್ರಹಿಂಸೆ ನೀಡುತ್ತಿದ್ದ ಗಂಡನ ಮನೆಯವರೇ ಆಶಾಳನ್ನು ಕೊಂದು ನಂತರ ನಾಲೆಗೆ ಎಸೆದಿದ್ದಾರೆ ಎಂದು ಮೃತ ಆಶಾ ಕುಟುಂಬದವರು ಆರೋಪಿಸಿದ್ದಾರೆ.
ಸದ್ಯ ಮಹೇಶ್ ಹಾಗೂ ಇತರರು ತಲೆ ಮರೆಸಿಕೊಂಡಿದ್ದಾರೆ.ಅಮಾಯಕಿ ಆಶಾ ಸಾವಿಗೆ ಕಾರಣರಾಗಿರುವವರನ್ನು ಕೂಡಲೇ ಬಂಧಿಸಿ, ತಕ್ಕ ಶಿಕ್ಷೆಗೆ ಗುರಿಪಡಿಸುವಂತೆ ಹೆತ್ತವರು ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ