ಅತೃಪ್ತರ ನೆರೆವಿನಿಂದ ಬಿಜೆಪಿ ಸರ್ಕಾರ ಉರುಳಿಸಿದರೆ, ತಮಿಳುನಾಡು ಮಾದರಿ ಅನುಸರಿಸಲು ಮಿತ್ರ ಪಕ್ಷಗಳ ಚಿಂತನೆ

ಬೆಂಗಳೂರು,ಡಿ.31- ಸಚಿವ ಸ್ಥಾನ ಕಳೆದುಕೊಂಡು ಅಜ್ಞಾತ ಸ್ಥಳದಲ್ಲಿರುವ ರಮೇಶ್ ಜಾರಕಿಹೊಳಿ ಮತ್ತು ಇತರ ಅತೃಪ್ತರ ನೆರವಿನಿಂದ ಬಿಜೆಪಿ ಸರ್ಕಾರವನ್ನು ಪತನಗೊಳಿಸಲು ಮುಂದಾದರೆ ತಮಿಳುನಾಡು ಮಾದರಿಯನ್ನು ಅನುಸರಿಸಿ ಸರ್ಕಾರ ಉಳಿಸಿಕೊಳ್ಳಲು ಮಿತ್ರ ಪಕ್ಷಗಳ ವರಿಷ್ಠರು ಚಿಂತನೆ ನಡೆಸಿದ್ದಾರೆ.

ಈವರೆಗೂ ನೇರವಾಗಿ ಕೆಲವು ಶಾಸಕರನ್ನು ಸಂಪರ್ಕಿಸಿ ಆಪರೇಷನ್ ಕಮಲ ನಡೆಸಲು ಯತ್ನಿಸಿತ್ತು.ಅದು ಯಶಸ್ವಿಯಾಗಿರಲಿಲ್ಲ. ಹಾಗಾಗಿ ಇದೀಗ ವಾಮಮಾರ್ಗದ ಮೂಲಕ ಬಿಜೆಪಿ ಸರ್ಕಾರವನ್ನು ಪತನಗೊಳಿಸಲು ಪ್ರಯತ್ನಿಸಿದೆ.

ಪಂಚರಾಜ್ಯ ಚುನಾವಣೆಗಳ ನಂತರ ಬಿಜೆಪಿ ತನ್ನ ಪ್ರಯತ್ನವನ್ನು ಕೈಬಿಟ್ಟು ತಟಸ್ಥವಾಗಿ ಉಳಿದಿತ್ತು. ಆದರೆ ಸಂಪುಟ ವಿಸ್ತರಣೆ ನಂತರ ಅಸಮಾಧಾನಗೊಂಡಿರುವ ಹಲವಾರು ಮಂದಿ ಪರ್ಯಾಯ ಆಯ್ಕೆಗಳ ಬಗ್ಗೆ ಯೋಚಿಸುತ್ತಿದ್ದು,ಅವರಿಗೆ ಬಿಜೆಪಿಯಿಂದ ಸ್ಪಷ್ಟ ಭರವಸೆಗಳು ಸಿಕ್ಕಿಲ್ಲ.

ಈ ನಡುವೆ ಸಂಪುಟದಿಂದ ಕೈಬಿಟ್ಟ ಕಾರಣಕ್ಕಾಗಿ ಮುನಿಸಿಕೊಂಡಿರುವ ರಮೇಶ್ ಜಾರಕಿಹೊಳಿಯವರು ಅಜ್ಞಾತ ಸ್ಥಳದಲ್ಲಿದ್ದು, ಅವರು ಏನು ಮಾಡುತ್ತಿದ್ದಾರೆ ಎಂದು ಯಾರಿಗೂ ಗೊತ್ತಿಲ್ಲ. ಒಂದು ವೇಳೆ ಸರ್ಕಾರ ಪತನಗೊಳಿಸಲು ರಮೇಶ್ ಜಾರಕಿಹೊಳಿ ಸಹಕರಿಸಿದರೆ ಮತ್ತು ಬಿಜೆಪಿ ನಾಯಕರು ಅಖಾಡಕ್ಕಿಳಿದರೆ ಕಾಂಗ್ರೆಸ್-ಜೆಡಿಎಸ್ ತಮ್ಮ ಬಳಿ ಇರುವ ಬ್ರಹ್ಮಾಸ್ತ್ರಗಳನ್ನು ಪ್ರಯೋಗಿಸುವ ತಯಾರಿಯಲ್ಲಿದ್ದಾರೆ.

ಅತೃಪ್ತ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ನಂತರವೇ ಮೈತ್ರಿ ಸರ್ಕಾರದ ಸಂಖ್ಯಾಬಲ ಕುಸಿಯಲಿದೆ. ಅದಕ್ಕಾಗಿ ಕಾಂಗ್ರೆಸ್‍ನಲ್ಲಿ ಎಷ್ಟು ಜನ ರಾಜೀನಾಮೆ ನೀಡುತ್ತಾರೋ ಅಷ್ಟೇ ಪ್ರಮಾಣದಲ್ಲಿ ಬಿಜೆಪಿಯ ಶಾಸಕರನ್ನು ಸೆಳೆಯಲು ಜೆಡಿಎಸ್-ಕಾಂಗ್ರೆಸ್ ಮುಂದಾಗಿವೆ.

ಈ ನಡುವೆ ತಮಿಳುನಾಡು ಮಾದರಿಯಲ್ಲಿ ಅತೃಪ್ತ ಮತ್ತು ಬಿಜೆಪಿಯ ಒಂದಿಷ್ಟು ಶಾಸಕರನ್ನು ಅಮಾನತುಗೊಳಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ.
ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿದ್ದ ಪಳನಿಸ್ವಾಮಿ ಮತ್ತು ಮತ್ತೊಂದು ಗುಂಪಿನ ನಡುವೆ ಗಲಾಟೆ ಶುರುವಾದಾಗ ಅಲ್ಲಿ 18 ಮಂದಿ ಶಾಸಕರನ್ನು ಉಚ್ಛಾಟನೆ ಮಾಡಿ ಸರ್ಕಾರ ಉಳಿಸಿಕೊಳ್ಳಲಾಗಿತ್ತು. ಕರ್ನಾಟಕದಲ್ಲೂ ಅದೇ ಮಾದರಿಯನ್ನು ಅನುಸರಿಸಿದರೆ ಹೇಗೆ ಎಂಬ ಚರ್ಚೆಗಳು ನಡೆಯುತ್ತಿವೆ.

ಅತೃಪ್ತ ಶಾಸಕರು ನೀಡುವ ರಾಜೀನಾಮೆಯನ್ನು ಅಂಗೀಕರಿಸದೆ ಕಾಲಹರಣ ಮಾಡುವುದು, ಸರ್ಕಾರಕ್ಕೆ ಧಕ್ಕೆಯಾಗುವ ಸಂದರ್ಭ ಬಂದರೆ ಬಿಜೆಪಿಯ ಮತ್ತು ಅತೃಪ್ತ ಶಾಸಕರನ್ನು ಅಮಾನತುಗೊಳಿಸುವುದು ಮಿತ್ರ ಪಕ್ಷಗಳ ಆಲೋಚನೆಯಾಗಿದೆ.

ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಅವರು ಕಾಂಗ್ರೆಸಿಗರೇ ಆಗಿರುವುದರಿಂದ ಈ ರೀತಿಯ ಕಾರ್ಯಯೋಜನೆಗಳನ್ನು ಜಾರಿಗೊಳಿಸಲು ಸುಲಭವಾಗಬಹುದೆಂಬ ವಿಶ್ವಾಸವನ್ನು ಮಿತ್ರಪಕ್ಷಗಳು ಹೊಂದಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ