ಬಿಬಿಎಂಪಿಗೆ ಹಿಡಿದಿರುವ ಗ್ರಹಣ ಇನ್ನೂ ಬಿಟ್ಟಿಲ್ಲ

ಬೆಂಗಳೂರು,ಡಿ.31- ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆಗೆ ಹಿಡಿದಿರುವ ಗ್ರಹಣ ಇನ್ನೂ ಬಿಟ್ಟಿಲ್ಲ.

ಜನವರಿ 5ರಂದು ಚುನಾವಣೆ ನಡೆಯಬಹುದು ಎಂಬ ನಿರೀಕ್ಷೆಯೂ ಇದೀಗ ಹುಸಿಯಾಗಿದ್ದು, ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿಗೆ ತೀವ್ರ ನಿರಾಸೆಯಾಗಿದೆ.
ಕಳೆದ ಡಿ.14ರಂದು ಬಿಬಿಎಂಪಿಯಲ್ಲಿ 12 ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿಯಾಗಿತ್ತು.ಈ ವೇಳೆ ಬಿಜೆಪಿ ಸದಸ್ಯರು, ಜೆಡಿಎಸ್ ಸದಸ್ಯರನ್ನು ಮುಂದಿಟ್ಟುಕೊಂಡು ನಡೆಸಿದ ಹೈಡ್ರಾಮ ಹಿನ್ನೆಲೆ ಚುನಾವಣೆ ಮುಂದೂಡಿಕೆಯಾಗಿತ್ತು.

ಸಾಮಾಜಿಕ ನ್ಯಾಯ ಸಮಿತಿಗೆ ಜೆಡಿಎಸ್‍ನ ಮಂಜುಳಾ ನಾರಾಯಣಸ್ವಾಮಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಲು ಉತ್ಸುಕತೆ ತೋರಿದರೆ, ಮತ್ತೊಂದೆಡೆ ವಾರ್ಡ್ ಮಟ್ಟದ ಕಾಮಗಾರಿ ಸಮಿತಿಗೆ ಜೆಡಿಎಸ್ ಸದಸ್ಯ ದೇವದಾಸ್ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾದರು.
ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ತಿಕ್ಕಾಟ ನಡೆದು, ಕಡೆಗೆ ಚುನಾವಣೆಯನ್ನೇ ಮುಂದೂಡಲಾಯಿತು.

ನಂತರ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆಯನ್ನು ಜ.5ರಂದು ನಡೆಸಲು ಉದ್ದೇಶಿಸಲಾಗಿತ್ತಾದರೂ ಈವರೆಗೆ ಸದಸ್ಯರಿಗೆ ಯಾವುದೇ ನೋಟೀಸ್ ನೀಡಿಲ್ಲ.
ನಿಯಮದಂತೆ 7 ದಿನಗಳ ಮುಂಚೆಯೇ ಸದಸ್ಯರಿಗೆ ನೋಟೀಸ್ ನೀಡಬೇಕು.ಆದರೆ ಇನ್ನೂ ನೋಟೀಸ್ ನೀಡದ ಕಾರಣ ಜ.5ರಂದು ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ನಡೆಯುವುದಿಲ್ಲ.

ಪ್ರಸಕ್ತ ವಾರ ಕಳೆದು ಮುಂದಿನ ವಾರ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ನಡೆಸುವ ಸಾಧ್ಯತೆಯಿದ್ದು, ಆಗಲೂ ಬಿಜೆಪಿ ಹೈಡ್ರಾಮ ನಡೆಸಲಿದೆ.

ಬಿಜೆಪಿಯ ಈ ತಂತ್ರಕ್ಕೆ ಕಾಂಗ್ರೆಸ್ ಕೂಡ ಪ್ರತಿ ತಂತ್ರ ಹೆಣೆದಿದ್ದು, ಕೌನ್ಸಿಲ್ ಸಭಾಂಗಣದಲ್ಲಿ ಚುನಾವಣೆ ನಡೆಸುವುದಕ್ಕಿಂತ, ಮೇಯರ್ ಅವರ ಕಚೇರಿಯಲ್ಲೇ ಅಧ್ಯಕ್ಷರ ಆಯ್ಕೆ ನಡೆಸುವ ಕುರಿತು ಚರ್ಚಿಸಲಾಗುತ್ತಿದೆ.ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯವನ್ನೂ ಕೇಳಲಾಗಿದೆ.

ಒಟ್ಟಾರೆ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆಗೆ ಬಿಬಿಎಂಪಿ ಮೀನಾಮೇಷ ಎಣಿಸುತ್ತಿದ್ದು, ಅಧ್ಯಕ್ಷ ಆಕಾಂಕ್ಷಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ